ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೋಟ್ಯಧಿಪತಿಯಾಗುವುದು ಹಲವರ ಕನಸು. ಆದರೆ, 27ನೇ ವಯಸ್ಸಿಗೆ ಕಷ್ಟಪಟ್ಟು ಬರೋಬ್ಬರಿ 1 ಕೋಟಿ ರೂಪಾಯಿ ಸಂಪತ್ತು ಕೂಡಿಟ್ಟರೂ ಸಂತೋಷ ಕಾಣದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸತತ ಕೆಲಸದ ಒತ್ತಡದಿಂದ ಮಾನಸಿಕ ಹಾಗೂ ದೈಹಿಕವಾಗಿ ಬಳಲಿ ಬೆಂಡಾಗಿರುವ ಆ ಯುವಕ, ಈಗಲೇ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಹಳ್ಳಿಗೆ ತೆರಳಿ ನಿವೃತ್ತಿ ಜೀವನ ನಡೆಸಲು ಸಾಧ್ಯವೇ ಎಂದು ಆನ್‌ಲೈನ್‌ನಲ್ಲಿ ಕೇಳಿದ ಪ್ರಶ್ನೆಗೆ ನೆಟ್ಟಿಗರು ವಾಸ್ತವದ ಕನ್ನಡಿ ಹಿಡಿದಿದ್ದಾರೆ.
ಕಳೆದ ಐದು ವರ್ಷಗಳಿಂದ ವಾರದ ಏಳೂ ದಿನಗಳೂ ವಿಶ್ರಾಂತಿಯಿಲ್ಲದೆ ದುಡಿದಿರುವ ಈ ಯುವ ಟೆಕ್ಕಿ, ಪ್ರತಿಷ್ಠಿತ ಐಟಿ ಕಂಪನಿಯ ಪೂರ್ಣಾವಧಿ ಉದ್ಯೋಗದ ಜೊತೆಗೆ ಬಿಡುವಿಲ್ಲದೆ ಫ್ರೀಲ್ಯಾನ್ಸಿಂಗ್ ಕೆಲಸವನ್ನೂ ಮಾಡುತ್ತಿದ್ದರು. ನಿರಂತರ ಡೆಡ್‌ಲೈನ್‌ಗಳ ಒತ್ತಡ, ಕಾರ್ಯಕ್ಷಮತೆಯ ಮೌಲ್ಯಮಾಪನದ ಆತಂಕ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಲ್ಲೇ ದಿನ ಕಳೆದಿದ್ದ ಈತ, ಕೊನೆಗೂ ಫಿಕ್ಸೆಡ್ ಡೆಪಾಸಿಟ್ (FD), ಮ್ಯೂಚುವಲ್ ಫಂಡ್‌ಗಳು ಮತ್ತು ಪಿಎಫ್ (EPF) ಮೂಲಕ ₹1 ಕೋಟಿ ನಿವ್ವಳ ಸಂಪತ್ತು (Net Worth) ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಗುರಿ ತಲುಪಿದಾಗ ಆತನಿಗೆ ಗೆಲುವಿನ ಸಂಭ್ರಮಕ್ಕಿಂತ ತೀವ್ರ ಮಾನಸಿಕ ಖಿನ್ನತೆ ಮತ್ತು ದಣಿವು ಮಾತ್ರ ಎದುರಾಗಿತ್ತು.
ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿದ ಆತ, ‘ನಾನು ಕೆಲಸ ಸಂಪೂರ್ಣವಾಗಿ ಬಿಟ್ಟು, ಸಣ್ಣ ಪಟ್ಟಣಕ್ಕೆ ಶಿಫ್ಟ್ ಆಗಿ ಒಂಟಿಯಾಗಿ ಸರಳ ನಿವೃತ್ತಿ ಜೀವನ ಸಾಗಿಸಬಹುದೇ?’ ಎಂದು ನಿವೃತ್ತಿ ಯೋಜನೆಗಳ ಆನ್‌ಲೈನ್ ವೇದಿಕೆಯಲ್ಲಿ ಸಲಹೆ ಕೇಳಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಸಣ್ಣ ವಯಸ್ಸಿನಲ್ಲೇ ಇಷ್ಟು ದೊಡ್ಡ ಮೊತ್ತ ಕೂಡಿಟ್ಟಿದ್ದಕ್ಕೆ ಅಭಿನಂದಿಸಿದ್ದಾರೆ.
ಆದರೆ, ಬಹುತೇಕ ಹಿರಿಯ ಹೂಡಿಕೆದಾರರು ಮತ್ತು ನೆಟ್ಟಿಗರು ಸದ್ಯಕ್ಕೆ ನಿವೃತ್ತಿ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ:
ಹಣದುಬ್ಬರದ ಹೊಡೆತ: ಇಂದಿನ ಕಾಲದಲ್ಲಿ 27ರ ವಯಸ್ಸಿನ ವ್ಯಕ್ತಿಗೆ ಮುಂದಿನ 50-60 ವರ್ಷಗಳ ಜೀವನಕ್ಕೆ ₹1 ಕೋಟಿ ಸಾಕಾಗುವುದಿಲ್ಲ. ಹೆಚ್ಚುತ್ತಿರುವ ದಿನಬಳಕೆ ವೆಚ್ಚ, ಹಣದುಬ್ಬರ (Inflation) ಮತ್ತು ಭವಿಷ್ಯದ ವೈದ್ಯಕೀಯ ವೆಚ್ಚಗಳು ಈ ಮೊತ್ತವನ್ನು ಕರಗಿಸಿಬಿಡುತ್ತವೆ.
ನಿವೃತ್ತಿಯಲ್ಲ, ಬೇಕಾಗಿರುವುದು ವಿಶ್ರಾಂತಿ: ನಿಮ್ಮ ಮುಖ್ಯ ಸಮಸ್ಯೆ ಹಣದ್ದಲ್ಲ, ಬದಲಿಗೆ ಅತಿಯಾದ ಕೆಲಸದಿಂದ ಉಂಟಾಗಿರುವ ತೀವ್ರ ಮಾನಸಿಕ ಆಯಾಸ. ಕೆಲಸವನ್ನೇ ಸಂಪೂರ್ಣ ತ್ಯಜಿಸುವ ಬದಲು ಕೆಲ ತಿಂಗಳುಗಳ ಕಾಲ ದೀರ್ಘ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯಿರಿ ಎಂದು ಕಿವಿಮಾತು ಹೇಳಿದ್ದಾರೆ.
ಕಡಿಮೆ ಒತ್ತಡದ ಕೆಲಸದ ಆಯ್ಕೆ: ಸಂಪಾದನೆಗಾಗಿ ಅತಿಯಾಗಿ ಹಪಹಪಿಸುವುದನ್ನು ನಿಲ್ಲಿಸಿ, ಮಾನಸಿಕ ನೆಮ್ಮದಿ ನೀಡುವ ಕಡಿಮೆ ಒತ್ತಡದ ಕೆಲಸವನ್ನು ಆಯ್ದುಕೊಳ್ಳಿ. ಈಗಾಗಲೇ ಹೂಡಿಕೆ ಮಾಡಿರುವ ಹಣ ಬೆಳೆಯುತ್ತಿರಲಿ, ದಿನನಿತ್ಯದ ಖರ್ಚಿಗೆ ಮಾತ್ರ ದುಡಿಯಿರಿ ಎಂದು ಸಲಹೆ ನೀಡಿದ್ದಾರೆ.
ಈ ಘಟನೆಯು ಇಂದಿನ ಯುವ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಆಯಾಸದ ನೈಜ ಚಿತ್ರಣವನ್ನು ಅನಾವರಣಗೊಳಿಸಿದ್ದು, ‘ವಿಶ್ರಾಂತಿಯ ಅಗತ್ಯತೆ’ ಹಾಗೂ ‘ಶಾಶ್ವತ ನಿವೃತ್ತಿ’ಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರಿಸಿದೆ.

