ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು ₹13,041 ಕೋಟಿ ವೆಚ್ಚದ 5 ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದರಲ್ಲಿ ನಾಲ್ಕು ರೈಲ್ವೆ ಯೋಜನೆಗಳು ಹಾಗೂ ಒಂದು ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿವೆ.
ಹೌದು. ದೇಶದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬುಧವಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ದೇಶಕ್ಕೆ ಅತ್ಯಂತ ಪ್ರಮುಖವಾದ ಐದು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಯೋಜನೆಗಳಿಗೆ ಒಟ್ಟಾಗಿ ₹13,041 ಕೋಟಿ ವೆಚ್ಚವಾಗಲಿದೆ.
ಯಾವ ಯೋಜನೆಗಳಿಗೆ ಅನುಮೋದನೆ?
ಬುಧವಾರ ನಡೆದ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಐದು ಯೋಜನೆಗಳಲ್ಲಿ ನಾಲ್ಕು ರೈಲ್ವೆ ಯೋಜನೆಗಳು ಹಾಗೂ ಒಂದು ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿವೆ.
ಹೌರಾ–ಚೆನ್ನೈ ಪ್ರಮುಖ ರೈಲು ಮಾರ್ಗದ ನಾಲ್ಕು ಹಳಿಗಳ ವಿಸ್ತರಣೆ:
ದೇಶದ ಪ್ರಮುಖ ರೈಲು ಮಾರ್ಗಗಳಲ್ಲಿ ಒಂದಾಗಿರುವ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಮತ್ತಷ್ಟು ಸುಗಮ ಹಾಗೂ ವೇಗಗೊಳಿಸುವ ಉದ್ದೇಶದಿಂದ ನಾಲ್ಕು ಹಳಿಗಳಾಗಿ ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕಟಕ್–ಪಾರಾದೀಪ್ ರೈಲು ಮಾರ್ಗ:
ಈ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮೂರನೇ ಮತ್ತು ನಾಲ್ಕನೇ ರೈಲು ಹಳಿಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.
ರೈಲು ಸಂಪರ್ಕ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇನ್ನೂ ಎರಡು ಪ್ರಮುಖ ರೈಲ್ವೆ ಯೋಜನೆಗಳಿಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಜಫರ್ಪುರ–ನೇಪಾಳ ಗಡಿ ರಸ್ತೆ ಯೋಜನೆ
ಐದನೇ ಯೋಜನೆಯು ರಸ್ತೆ ಸಾರಿಗೆಗೆ ಸಂಬಂಧಿಸಿದೆ. ಬಿಹಾರದ ಸೋನ್ಬರ್ಸಾ ಮಾರ್ಗದ ಮೂಲಕ ಮುಜಫರ್ಪುರದಿಂದ ಸೀತಾಮಢಿ ಮಾರ್ಗವಾಗಿ ನೇಪಾಳ ಗಡಿಯವರೆಗೆ ನಾಲ್ಕು ಪಥದ ರಸ್ತೆ ನಿರ್ಮಿಸಲಾಗುತ್ತದೆ.
ಈ ಯೋಜನೆಗಳು ಪೂರ್ಣಗೊಂಡ ಬಳಿಕ ದೇಶದ ವಿವಿಧ ಭಾಗಗಳ ನಡುವಿನ ಸಾರಿಗೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ವ್ಯಾಪಾರ ಚಟುವಟಿಕೆಗಳಿಗೆ ವೇಗ ಸಿಗುವುದರ ಜೊತೆಗೆ ಸಾಮಾನ್ಯ ಜನರ ಪ್ರಯಾಣವೂ ಸುಲಭ ಹಾಗೂ ವೇಗವಾಗಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.
ಒಟ್ಟಿನಲ್ಲಿ, ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಮತ್ತೊಂದು ಮಹತ್ವದ ಹೆಜ್ಜೆ ಇದಾಗಿದೆ.

