ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಗುಡ್ನ್ಯೂಸ್ ನೀಡಿದೆ. ಮೆಟ್ರೋ ನಿಲ್ದಾಣದ ಅಕ್ಕಪಕ್ಕದ ಬಡಾವಣೆಗಳಿಂದ ಸೈಕಲ್ ಮೂಲಕ ನಿಲ್ದಾಣಕ್ಕೆ ಬಂದು ಅಲ್ಲಿಂದ ಮೆಟ್ರೋ ಏರುವ ಜನರು ನಿರಾಳರಾಗಬಹುದು.
ಹೌದು ನಮ್ಮ ಮೆಟ್ರೋಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಬಿಎಂಆರ್ಸಿಎಲ್ ಉಚಿತ ಸೈಕಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಹಲವಾರು ಜನರು ಈಗಾಗಲೇ ಸೈಕಲ್ನಲ್ಲಿ ಮೆಟ್ರೋ ನಿಲ್ದಾಣಕ್ಕೆ ಬಂದು ಅಲ್ಲಿಂದ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ.
ಕೊನೆ ಮೈಲಿಯ ಸಂಪರ್ಕವನ್ನು ಇನ್ನಷ್ಟು ಸುಧಾರಣೆ ಮಾಡಲು ಬಿಎಂಆರ್ಸಿಎಲ್ 9 ನಮ್ಮ ಮೆಟ್ರೋ ನಿಲ್ದಾಣದಲ್ಲಿ ಉಚಿತವಾಗಿ ಸೈಕಲ್ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಿದೆ. ನಮ್ಮ ಮೆಟ್ರೋ 3 ಮಾರ್ಗದ 9 ನಿಲ್ದಾಣಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಉಚಿತವಾಗಿ ಸೈಕಲ್ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲು ಟೆಂಡರ್ ಕರೆಯಲಾಗಿದೆ. ಫೆಬ್ರವರಿ 9ರ ತನಕ ಟೆಂಡರ್ ಸಲ್ಲಿಕೆ ಮಾಡಲು ಅವಕಾಶವಿದೆ. ಬಳಿಕ ಯಾವ ಕಂಪನಿ ಅಂತಿಮಗೊಳಿಸಲಾಗುತ್ತದೆ? ಎಂಬುದು ತಿಳಿಯಲಿದೆ.
ಸದ್ಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸೈಕಲ್ ಪಾರ್ಕಿಂಗ್ ಮಾಡಲು ಅವಕಾಶವಿದೆ. ಆದರೆ ಅದಕ್ಕೆ ಗಂಟೆಗೆ 1 ರೂ. ಮತ್ತು ದಿನಕ್ಕೆ ಗರಿಷ್ಠ 10 ರೂ. ಶುಲ್ಕವನ್ನು ಪಾವತಿಸಬೇಕಿದೆ. ಆದ್ದರಿಂದ ಯಾವ ನಿಲ್ದಾಣದಲ್ಲಿ ಹೆಚ್ಚಿನ ಸೈಕಲ್ ಬರುತ್ತವೆ? ಎಂದು ಅಧ್ಯಯನ ನಡೆಸಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಾಯೋಗಿಕವಾಗಿ 9 ನಿಲ್ದಾಣದಲ್ಲಿ ಸೈಕಲ್ ಉಚಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಈ ಯೋಜನೆ ಯಶಸ್ವಿಯಾಗಿ ಇತರ ನಿಲ್ದಾಣಗಳಲ್ಲಿಯೂ ಸೈಕಲ್ ಸಂಖ್ಯೆ ಹೆಚ್ಚಾದರೆ ಅಲ್ಲಿಯೂ ಉಚಿತ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾವ ಯಾವ ನಿಲ್ದಾಣಗಳು
- ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ, ಬೈಯಪ್ಪನಹಳ್ಳಿ
- ಹಸಿರು ಮಾರ್ಗದಲ್ಲಿ ಮಾದಾವರ, ಪೀಣ್ಯ ಇಂಡಸ್ಟ್ರಿ, ಜೆ.ಪಿ.ನಗರ
- ಹಳದಿ ಮಾರ್ಗದಲ್ಲಿ ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಗಿಗುಡ್ಡ, ಜಯದೇವ
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೇಗೆ ಮೂಲ ಸೌಕರ್ಯವನ್ನು ಅಭಿವೃದ್ಧಿ ಮಾಡಬೇಕು? ಎಂದು ಸಮೀಕ್ಷೆಯನ್ನು ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಉಚಿತವಾಗಿ ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.
ಆದ್ದರಿಂದ ಅತಿ ಹೆಚ್ಚು ಸೈಕಲ್ಗಳು ಆಗಮಿಸುವ ಮೂರು ಮಾರ್ಗದ ನಮ್ಮ ಮೆಟ್ರೋ ನಿಲ್ದಾಣದ ಪಟ್ಟಿಯನ್ನು ತಯಾರು ಮಾಡಿ, 9 ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ಎಂದು ಕಾದು ನೋಡಬೇಕಿದೆ.
ನಮ್ಮ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಖಾಸಗಿ ವಾಹನ, ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆ ಮೂಲಕ ಆಗಮಿಸುತ್ತಾರೆ. ಮೆಟ್ರೋ ನಿಲ್ದಾಣ ತಲುಪುವುದು/ ಅಲ್ಲಿಂದ ವಾಪಸ್ ಹೋಗುವ ವ್ಯವಸ್ಥೆ ಸುಧಾರಿಸಲು ಬಿಎಂಆರ್ಸಿಎಲ್ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬಿಎಂಆರ್ಸಿಎಲ್ ನಮ್ಮ ಮೆಟ್ರೋ ನಿಲ್ದಾಣ ಪಾರ್ಕಿಂಗ್ ಪ್ರದೇಶ ನಿರ್ವಹಣೆಯನ್ನು ಖಾಸಗಿ ಅವರಿಗೆ ಗುತ್ತಿಗೆ ನೀಡುತ್ತದೆ. ಅವರೇ ಪಾರ್ಕಿಂಗ್ ಶುಲ್ಕ ಸಂಗ್ರಹ ಸೇರಿದಂತೆ ಇತರ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಪಾರ್ಕಿಂಗ್ ದರ ಹೆಚ್ಚಿದೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.
ಸೈಕಲ್ಗಳ ಕಳ್ಳತನ ತಡೆಯಬೇಕು, ಸೈಕಲ್ಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ಬೇಕು ಎಂದು ಮೆಟ್ರೋ ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಆದ್ದರಿಂದ ಉಚಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಈಗ ಟೆಂಡರ್ ಕರೆಯಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಜನರ ಪ್ರತಿಕ್ರಿಯೆ ಹೇಗಿರಲಿದೆ? ಎಂದು ನೋಡಬೇಕಿದೆ.

