ಶಿವಮೊಗ್ಗ: ನಿಧಿಯ ರೂಪದಲ್ಲಿ ದೊರೆತ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ 9.60 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು ಮೂಲದ ವ್ಯಕ್ತಿಯೊಬ್ಬರನ್ನು ನಂಬಿಸಿ ಅವರಿಂದ 9.60 ಲಕ್ಷ ರೂ. ನಗದು ಮೊಬೈಲ್ ಫೋನ್ ಗಳನ್ನು ದೋಚಲಾಗಿದೆ. ಮೈಸೂರಿನ ಕೆಆರ್ ಪುರಂ ನಿವಾಸಿ ಜಗದೀಶ್ ವಂಚನೆಗೆ ಒಳಗಾದವರು. ಅವರು ನೀಡಿದ ದೂರಿನ ಮೇರೆಗೆ ಮಂಜು ಸೇರಿದಂತೆ ಐದು ಜನ ಅಪರಿಚಿತರ ವಿರುದ್ಧ ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 1ರಂದು ಜಗದೀಶ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ತನಗೆ ನಿಧಿಯ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ. ಅವುಗಳನ್ನು ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ಆಮಿಷವೊಡ್ಡಿ ವಿಡಿಯೋ ಕಾಲ್ ಮೂಲಕ ನಾಣ್ಯಗಳನ್ನು ತೋರಿಸಿದ್ದಾನೆ.
ಜೂನ್ 2ರಂದು ಜಗದೀಶ್ ಹರಿಹರಕ್ಕೆ ತೆರಳಿದ ವೇಳೆ ಆರೋಪಿಗಳು ಒಂದು ನಾಣ್ಯವನ್ನು ನೀಡಿ ಅದರ ಅಸಲಿಯತ್ತು ಪರಿಶೀಲಿಸುವಂತೆ ತಿಳಿಸಿದ್ದಾರೆ. ಮೈಸೂರಿಗೆ ಮರಳಿದ ಜಗದೀಶ್ ಚಿನ್ನದ ನಾಣ್ಯ ಪರೀಕ್ಷೆಗೆ ಒಳಪಡಿಸಿದಾಗ ಅದು ಅಸಲಿ ಚಿನ್ನದ ನಾಣ್ಯ ಎನ್ನುವುದು ಗೊತ್ತಾಗಿದೆ.
ಜೂನ್ 3ರಂದು ಮತ್ತೆ ಸಂಪರ್ಕಿಸಿದ ಆರೋಪಿಗಳು ಅರ್ಧ ಕೆಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ 10 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಣ ಹೊಂದಿಸಲು ಮುಂದಾದ ಜಗದೀಶ್ ಖಾಸಗಿ ಹಣಕಾಸು ಸಂಸ್ಥೆಯಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಜೂನ್ 4ರಂದು ತಮ್ಮ ಅಳಿಯ ಮನೋಜ್ ಮತ್ತು ಚಾಲಕ ರೋಹಿತ್ ಸಿಂಗ್ ಅವರೊಂದಿಗೆ ಜಗದೀಶ್ ಸಾಗರ ತಾಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಬಂದಿದ್ದಾರೆ.
ಅಲ್ಲಿ ಆರೋಪಿಗಳು ಹಣ ಪಡೆದು ಪರಿಶೀಲಿಸುವಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಅಪರಿಚಿತರು ತಮ್ಮನ್ನು ಪೊಲೀಸರು ಎಂದು ಬಿಂಬಿಸಿಕೊಂಡಿದ್ದಾರೆ. ಇಲ್ಲಿ ಸ್ಮಗ್ಲಿಂಗ್ ವ್ಯವಹಾರ ನಡೆಸುತ್ತಿದ್ದೀರಾ ಎಂದು ಗದರಿಸಿದ್ದಾರೆ. ಈ ಗೊಂದಲದ ನಡುವೆ ಮೊದಲೇ ಅಲ್ಲಿದ್ದ ಇಬ್ಬರು ಯಾರೋ ಬಂದಿದ್ದಾರೆ ಓಡಿಹೋಗಿ ಎಂದು ಹೇಳಿ ಜಗದೀಶ್ ಅವರ ಬಳಿ ಇದ್ದ 9.60 ಲಕ್ಷ ರೂ. ನಗದು, ನಾಣ್ಯದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದನ್ನೆಲ್ಲಾ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮನೋಜ್ ಅವರ ಮೊಬೈಲ್ ಹಾಗೂ ಜಗದೀಶ್ ಅವರ ಮೊಬೈಲ್ ಫೋನ್ ಗಳನ್ನು ಕಸಿದುಕೊಂಡು ಉಳಿದವರು ಕೂಡ ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ವಂಚನೆಗೊಳಗಾದ ಜಗದೀಶ್ ಆನಂದಪುರಂ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದೆ.

