HomeKarnatakaಉದ್ಯಮಿಗೆ 2.66 ಕೋಟಿ ವಂಚನೆ: ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಉದ್ಯಮಿಗೆ 2.66 ಕೋಟಿ ವಂಚನೆ: ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಬೆಂಗಳೂರು: ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಶಾಖೆಯ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್, ಈತನಿಗೆ ಸಾಥ್ ನೀಡಿದ್ದ ಅರುಣ್ ಕುಮಾರ್ ಮತ್ತು ಕಿರಣ್ ಬಂಧಿತ ಆರೋಪಿಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತ ಮುಖ್ಯ ಆರೋಪಿ ವಿನೋದ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲೇ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದ ಸುಬ್ರಮಣಿ ಎಂಬ ಉದ್ಯಮಿಯನ್ನು ಟಾರ್ಗೆಟ್ ಮಾಡಿದ್ದ. ಸುಬ್ರಮಣಿ ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದು, ತಿಂಗಳಿಗೆ ಹತ್ತು ಕೋಟಿಗೂ ಅಧಿಕ ಹಣದ ವಹಿವಾಟು ನಡೆಸುತ್ತಿದ್ದರು. ಈ ಹಣದ ಮೇಲೆ ಕಣ್ಣು ಹಾಕಿದ್ದ ಮ್ಯಾನೇಜರ್ ವಿನೋದ್, ಉದ್ಯಮಿಗೆ ವಂಚಿಸಲು ಪ್ಲಾನ್ ಮಾಡಿದ್ದ.

ಬೇರೆಯವರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದ ವಿನೋದ್, ಇಬ್ಬರು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಂತರ ಉದ್ಯಮಿ ಸುಬ್ರಮಣಿ ಅವರಿಗೆ ವಾಟ್ಸಾಪ್ ಕರೆ ಮಾಡಿ, ತನಗೆ ದೊಡ್ಡ ಮಟ್ಟದ ಪ್ರಭಾವವಿದ್ದು, ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಬಿಸಿನೆಸ್ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕೆ ಪ್ರತಿಯಾಗಿ ಶೇ 10ರಷ್ಟು ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟು, ಮುಂಗಡವಾಗಿ ಬರೋಬ್ಬರಿ 2 ಕೋಟಿ 66 ಲಕ್ಷ ರೂಪಾಯಿ ಹಣವನ್ನು ಆರ್​​ಟಿಜಿಎಸ್ (RTGS) ಮೂಲಕ ತಾನು ಸೃಷ್ಟಿಸಿದ್ದ ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ.

ಹಣ ವರ್ಗಾವಣೆಯಾದ ನಂತರ ವಿನೋದ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ಸುಬ್ರಮಣಿ ತಕ್ಷಣ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಮ್ಯಾನೇಜರ್ ವಿನೋದ್‌ನಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ತಮಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಉದ್ಯಮಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕೇವಲ ಎರಡೇ ದಿನಗಳಲ್ಲಿ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಕಿರಣ್ ಪಿಗ್ಮಿ ಕಲೆಕ್ಟರ್ ಆಗಿದ್ದು, ವಂಚನೆಯ ಹಣವನ್ನು ನಗದು ಮಾಡಿಕೊಡಲು ಸಹಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular