ಉಡುಪಿ: ಕೊಲ್ಲೂರು ದೇವಸ್ಥಾನ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸಿದ್ದ ಓರ್ವ ಆರೋಪಿಯನ್ನು ಕೊಲ್ಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದಿದ್ದ ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸಿರ್ ಹುಸೇನ್ ಬಂಧಿತ ಆರೋಪಿ. ನಕಲಿ ವೆಬ್ಸೈಟ್ ಮೂಲಕ ಭಕ್ತರಿಗೆ ನಾಸಿರ್ ವಂಚಿಸುತ್ತಿದ್ದ. ಅಧಿಕೃತ ವೆಬ್ಸೈಟ್ ಹೋಲುವ ರೀತಿಯಲ್ಲಿ ನಕಲಿ ವೆಬ್ಸೈಟ್ ಕ್ರಿಯೇಟ್ ಮಾಡಿದ್ದ. ಭಕ್ತರಿಂದ ಮುಂಗಡವಾಗಿ ರೂಮ್ ಬುಕಿಂಗ್ ಮಾಡಿಸಿಕೊಳ್ಳಲಾಗಿತ್ತು. ಸ್ಕ್ಯಾನರ್ ಮೂಲಕ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಲಾಗಿತ್ತು. ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮುಜರಾಯಿ ಇಲಾಖೆಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ವಂಚಿಸಿದ ಬಗ್ಗೆ ನವೆಂಬರ್ 3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಡಿ. 19ರಂದು ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ಕೃತ್ಯಕ್ಕೆ ಬಳಸಿದ ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

