ಬೆಂಗಳೂರು ದಕ್ಷಿಣ ಭಾಗದ ಜನರಿಗೆ ಬಿಗ್ ಅಪ್‌ಡೇಟ್ ಒಂದಿದೆ. ಮೈಸೂರು ರಸ್ತೆಯಲ್ಲಿರುವ ನಾಯಂಡನಹಳ್ಳಿ ರೈಲು ನಿಲ್ದಾಣದಲ್ಲಿ 4 ರೈಲುಗಳ ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ಸಾವಿರಾರು ಜನರಿಗೆ ಅನುಕೂಲಾಗಲಿದೆ.
ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ವಿವಿಧ ರೈಲುಗಳಿಗೆ ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂಬ ಈ ಭಾಗದ ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಹೇಳಿದ್ದಾರೆ.
ಯಾವ-ಯಾವ ರೈಲುಗಳು?
- ಮೈಸೂರು-ಕೆಎಸ್‌ಆರ್ ಸಿಟಿ ಚಾಮುಂಡಿ ಎಕ್ಸ್‌ಪ್ರೆಸ್ (16215/16216)
- ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307/17308)
- ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ (16235/16236)
- ಮೈಸೂರು-ಪಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (16535/16536)
ಈ ಘೋಷಣೆ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಹಾಕಿದ್ದು, ಬೆಂಗಳೂರಿನ ನಾಯಂಡನಹಳ್ಳಿ ಮತ್ತು ಸುತ್ತಮುತ್ತಲ ಭಾಗದ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರ ವಿಶೇಷ ಆಸಕ್ತಿಯಿಂದಾಗಿ ಈ ಕೆಳಗಿನ ನಾಲ್ಕು ಪ್ರಮುಖ ರೈಲುಗಳು ಇನ್ನು ಮುಂದೆ ನಾಯಂಡನಹಳ್ಳಿ ನಿಲ್ದಾಣದಲ್ಲಿ ನಿಲ್ಲಲಿವೆ ಎಂದು ಹೇಳಿದ್ದಾರೆ.
ಈ ನಿರ್ಧಾರದಿಂದ ನಾಯಂಡನಹಳ್ಳಿ, ನಾಗರಭಾವಿ, ಆರ್.ಆರ್. ನಗರ, ಚಂದ್ರಾಲೇಔಟ್ ಸೇರಿದಂತೆ ಹಲವು ಬಡಾವಣೆಗಳ ಜನರಿಗೆ ಹಾಗೂ ಮೈಸೂರು-ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಭಾಗಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ್ ಜೀ & ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ನಾಯಂಡನಹಳ್ಳಿಯಲ್ಲಿರುವ ರೈಲು ನಿಲ್ದಾಣ ನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದು. ಪ್ರತಿದಿನ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ರೈಲುಗಳು ಇಲ್ಲಿ ನಿಲುಗಡೆ ಹೊಂದಿವೆ.
ಮೈಸೂರಿನಿಂದ ಬೆಂಗಳೂರು ನಗರಕ್ಕೆ ಬರುವ ಪ್ರಮುಖ ರೈಲುಗಳಿಗೆ ಇಲ್ಲಿ ನಿಲುಗಡೆ ಇದ್ದು, ಬೆಂಗಳೂರು ದಕ್ಷಿಣ ಭಾಗದ ಜನರು ಮೆಜೆಸ್ಟಿಕ್‌ಗೆ ಹೋಗುವ ಬದಲು ಇಲ್ಲಿಯೇ ಬಂದು ರೈಲನ್ನು ಹತ್ತಬಹುದಾಗಿದೆ. ಈಗ ಇನ್ನೂ 4 ರೈಲುಗಳನ್ನು ಇಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಿದ್ದು, ಜನರಿಗೆ ಉಪಯೋಗವಾಗಲಿದೆ.
ನಾಯಂಡಹಳ್ಳಿ ರೈಲು ನಿಲ್ದಾಣದಿಂದ ಜನರು ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲನ್ನು ಏರಿ ನಗರದೊಳಗೆ ಸಂಚಾರ ದಟ್ಟಣೆಗೆ ಸಿಲುಕದೇ ಆಗಮಿಸಬಹುದು. ಆದ್ದರಿಂದ ಈ ರೈಲು ನಿಲ್ದಾಣದ ಮೈಸೂರು ರಸ್ತೆ ಭಾಗದಲ್ಲಿನ ಪ್ರಮುಖ ನಿಲ್ದಾಣವಾಗಿದೆ.

