ಬೆಂಗಳೂರು: ಬೆಂಗಳೂರಿನ ಚಿಕ್ಕಬಾಣಾವರ ಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ 14 ವರ್ಷಗಳ ಹಿಂದೆ ಗ್ರಾಹಕನ ಕೊಲೆ ಮಾಡಿ 15 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಿಹಾರದ ಮೂವರು ಮತ್ತು ಛತ್ತೀಸ್ ಗಢದ ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಬಿಹಾರ ದೇವೇಸ್ ಕುಮಾರ್ ಸಿಂಗ್, ವಿಕಾಸ್ ಕುಮಾರ್ ಗುಪ್ತಾ, ಇಮ್ರಾನ್ ಮತ್ತು ಛತ್ತಿಸ್ ಗಢದ ಪ್ರೇಮ್ ಕುಮಾರ್ ಸಾಹು ಎಂಬುವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನಾಲ್ವರಿಗೂ ತಲಾ 90 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಇದರ ಪೈಕಿ ಶೇಕಡ 80ರಷ್ಟು ಹಣವನ್ನು ಕೊಲೆಗೀಡಾದ ಮುರುಳಿಧರ ಎಂಬುವರ ಪತ್ನಿಗೆ ಪರಿಹಾರ ನೀಡವಂತೆ ತಿಳಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಕಾಸ್ ಕುಮಾರ್ ಗುಪ್ತಾ, ಇಮ್ರಾನ್ ಮತ್ತು ಪ್ರೇಮ್ ಕುಮಾರ್ ಸಾಹು ಅವರನ್ನು ಕುಲಾಷೆಗೊಳಿಸಿ 2016ರ ಏಪ್ರಿಲ್ ನಲ್ಲಿ ಆದೇಶಿಸಿತ್ತು. ಮೊದಲನೇ ಆರೋಪಿ ದೇವೇಸ್ ಕುಮಾರ್ ನನ್ನು ಅತಿಕ್ರಮ ಪ್ರವೇಶ ಮತ್ತು ದರೋಡೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಜೈಲು ಶಿಕ್ಷೆ ವಿಧಿಸಲಾಯಿತು. ಈ ಆದೇಶ ಪ್ರಶ್ನಿಸಿ ದೇವೇಸ್ ಕುಮಾರ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ.
ಮತ್ತೊಂದೆಡೆ ಎಲ್ಲಾ ಆರೋಪಿಗಳನ್ನು ಕೊಲೆ, ದರೋಡೆ, ಅತಿಕ್ರಮ ಪ್ರವೇಶ ಸೇರಿ ಹಲವು ಅಪರಾಧಗಳಲ್ಲಿ ದೋಷಿಗಳೆಂದು ತೀರ್ಮಾನಿಸಿ ಗರಿಷ್ಟ ಶಿಕ್ಷೆ ವಿಧಿಸಬೇಕು ಎಂದು ಕೋರಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
2012ರ ನವೆಂಬರ್ 19ರಂದು ಸಂಜೆ 4 ಗಂಟೆಗೆ ಪಿಸ್ತೂಲ್ ಹಿಡಿದು ಕಾರ್ಪೊರೇಷನ್ ಬ್ಯಾಂಕಿಗೆ ನುಗ್ಗಿದ ಆರೋಪಿ ದೇವೇಸ್ ಕುಮಾರ್ ಸಿಂಗ್ ಮ್ಯಾನೇಜರ್ ನನ್ನು ಹೊರಗೆ ಕರೆದು ಹಣ ನೀಡಲು ಬೇಡಿಕೆ ಇಟ್ಟಿದ್ದ. ಗ್ರಾಹಕರಿಗೆ ಪಿಸ್ತೂಲ್ ತೋರಿಸಿ ಅಲುಗಾಡದಂತೆ ಎಚ್ಚರಿಕೆ ನೀಡಿದ್ದ. ಎಚ್ಚರಿಕೆ ಪಾಲಿಸದ ಮುರುಳಿಧರ ಎಂಬಾತನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ ಕ್ಯಾಶಿಯರ್ ನಿಂದ 15.23 ಲಕ್ಷ ರೂ. ದರೋಡೆ ಮಾಡಿದ್ದ. ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅದೇ ದಿನ ಆರೋಪಿ ದೇವೇಸ್ ಕುಮಾರ್ ನನ್ನು ಬಂಧಿಸಿ 7 ಲಕ್ಷ ರೂ. ಜಪ್ತಿ ಮಾಡಿದ್ದರು. ವಿಚಾರಣೆ ನಡೆಸಿದಾಗ ಇತರೆ ಮೂವರ ಬಗ್ಗೆ ಬಾಯಿಬಿಟ್ಟಿದ್ದು ಅವರನ್ನು ಕೂಡ ಬಂಧಿಸಿ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

