ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮಾರ್ಚ್ ತಿಂಗಳಿನಲ್ಲಿ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಭರವಸೆ ಇದೆ. ಚುನಾವಣೆ ಗೆಲುವಿಗೆ ಈಗಾಗಲೇ ತಂತ್ರ ರೂಪಿಸಲಾಗುತ್ತಿದೆ.
ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ಈ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2025ರಲ್ಲಿ ದೆಹಲಿ, ಬಿಹಾರ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಪಕ್ಷ 2029ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಚುನಾವಣೆ ಗೆಲ್ಲಬೇಕಿದೆ.
2025ರ ಡಿಸೆಂಬರ್ನಲ್ಲಿ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಭರವಸೆ ಮೂಡಿದೆ. ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಎಲ್ಡಿಎಫ್ ಎರಡು ಬಾರಿ ಅಧಿಕಾರ ಹಿಡಿದಿದ್ದು, ಈ ಬಾರಿ ಆಡಳಿತ ವಿರೋಧಿ ಅಲೆ ಇದೆ. ಆದ್ದರಿಂದ ಯುಡಿಎಫ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕೇರಳ ಪಕ್ಕದ ತಮಿಳುನಾಡಿನಲ್ಲಿ ಸಹ ಕಾಂಗ್ರೆಸ್ ಪಕ್ಷ ಉತ್ಸಾಹದಲ್ಲಿದೆ. ರಾಜ್ಯದ ಆಡಳಿತ ಪಕ್ಷವಾದ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. 2ನೇ ಬಾರಿಯೂ ಗೆದ್ದು ರಾಜ್ಯದಲ್ಲಿ ಆಡಳಿತ ಹಿಡಿಯುವ ಉತ್ಸಾಹದಲ್ಲಿ ಮೈತ್ರಿಕೂಟವಿದೆ.
ಆದರೆ ಸೀಟು ಹಂಚಿಕೆ, ಅಧಿಕಾರ ಹಂಚಿಕೆ ಕಾಂಗ್ರೆಸ್-ಡಿಎಂಕೆ ಮೈತ್ರಿಯಲ್ಲಿ ಭಿನ್ನಮತ ಮೂಡಿಸಿದೆ. ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟಿರುವ ಕಾಂಗ್ರೆಸ್ ಬೇಡಿಕೆಗೆ ಡಿಎಂಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ ಮೈತ್ರಿ ಮುಂದುವರೆಯುವ ಸಾಧ್ಯತೆ ಇದೆ ಎಂಬುದು ಸದ್ಯದ ಮಾಹಿತಿ.
ಪಶ್ಚಿಮ ಬಂಗಾಳ, ಅಸ್ಸಾಂ: ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದೆ.
2021ರ ಚುನಾವಣೆಯಲ್ಲಿ ಸ್ಪರ್ಧಿಸಿದ 91 ಸೀಟುಗಳಲ್ಲಿಯೂ ಗೆಲ್ಲಲು ವಿಫಲವಾಗಿದ್ದ ಕಾಂಗ್ರೆಸ್ ಶೇ 9.32ರಷ್ಟು ಮಾತ್ರ ಮತಗಳನ್ನು ಪಡೆದಿತ್ತು. ಈ ಬಾರಿ ಮತಗಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿ ಪಕ್ಷವಿದೆ.
ಅಸ್ಸಾಂನಲ್ಲಿ ಕಾಂಗ್ರೆಸ್ 29 ಸೀಟುಗಳನ್ನು ಹೊಂದಿದೆ. ಈ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ ಅಲೆಯ ನಡುವೆಯೇ ಆ ಸೀಟುಗಳನ್ನು ಉಳಿಸಿಕೊಳ್ಳಬೇಕಿದೆ. ಆದರೆ ಚುನಾವಣೆಗೆ ಮೊದಲೇ ನಾಯಕರು ಪಕ್ಷ ಬಿಡುತ್ತಿರುವುದು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿದೆ.
ಕೇರಳದಲ್ಲಿ ಒಂದು ವೇಳೆ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದರೆ, ಮುಖ್ಯಮಂತ್ರಿ ಪಟ್ಟಕ್ಕಾಗಿ ಶಶಿ ತರೂರ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ನಡುವೆ ನೇರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದು, ಪಕ್ಷವು ಚೆನ್ನಿತ್ತಲ ಅವರನ್ನು ಚುನಾವಣಾ ಪ್ರಚಾರದ ನಾಯಕನನ್ನಾಗಿ ಮತ್ತು ತರೂರ್ ಅವರನ್ನು ಅವರ ಉಪನಾಯಕನನ್ನಾಗಿ ನೇಮಿಸಿದೆ. ಚುನಾವಣಾ ಪ್ರಚಾರಕ್ಕೆ ಸಾಮೂಹಿಕ ನಾಯಕತ್ವದ ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.
2025ರ ಡಿಸೆಂಬರ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಉತ್ತಮ ಪ್ರದರ್ಶನದಿಂದ ಕಾಂಗ್ರೆಸ್ ಚೇತರಿಸಿಕೊಂಡಿದೆ. ಅಷ್ಟೇ ಮುಖ್ಯವಾಗಿ ಪಕ್ಷವು ಶಶಿ ತರೂರ್ ಅವರಿಂದ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿಕೊಂಡಂತೆ ಕಾಣಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸುವಂತೆ ತೋರುತ್ತಿದ್ದ ಶಶಿ ತರೂರ್ ಕಾಂಗ್ರೆಸ್ ಆತಂಕಕ್ಕೆ ಕಾರಣವಾಗಿದ್ದರು. ಅವರು ಪಕ್ಷಾಂತರ ಮಾಡಬಹುದು ಎಂಬ ಮುನ್ಸೂಚನೆಗಳನ್ನು ಹಲವರು ಹೇಳಿದ್ದರು. ಆದರೆ ಕಾಂಗ್ರೆಸ್ ಮತ್ತು ಅವರ ನಡುವಿನ ಸಂಬಂಧ ಸುಧಾರಿಸಿದ್ದು, ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಹಾಯಕವಾಗಲಿದೆ.

