ಹೈದರಾಬಾದ್: ತೆಲಂಗಾಣದಲ್ಲಿ ಇಂದು ಹೊಸ ರಾಜಕೀಯ ಪಕ್ಷ ಘೋಷಣೆ ಆಗಲಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ಪುತ್ರಿ ಕೆ. ಕವಿತಾ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ತೆಲಂಗಾಣ ಜಾಗೃತಿ ಸಂಘಟನೆ ಅಧ್ಯಕ್ಷರಾಗಿರುವ ಕೆ. ಕವಿತಾ ಇಂದು ಮೇಡ್ಚಕ್ ಜಿಲ್ಲೆಯ ಮುನಿರಾಬಾದ್ ನಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೊಸ ಪಕ್ಷದ ಹೆಸರನ್ನು ಕವಿತಾ ಘೋಷಣೆ ಮಾಡಲಿದ್ದಾರೆ. ಸುಮಾರು 50 ಸಾವಿರ ಜನರನ್ನು ಸೇರಿಸಿ ಹೊಸ ಪಕ್ಷದ ಹೆಸರು ಘೋಷಿಸಲು ಸಜ್ಜಾಗಿದ್ದಾರೆ.
ಸದ್ಯ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷರಾಗಿರುವ ಕೆ. ಕವಿತಾ ತಮ್ಮ ಹೊಸ ಪಕ್ಷಕ್ಕೆ ತೆಲಂಗಾಣ ಜಾಗೃತಿ ಹೆಸರನ್ನು ಇಡುತ್ತಾರೆಯೇ ಅಥವಾ ಈ ಹಿಂದೆ ತಂದೆ ಆರಂಭಿಸಿದ್ದ ಟಿ.ಆರ್.ಎಸ್. ಹೆಸರನ್ನೇ ಇಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ತಂದೆ ಕೆಸಿಆರ್ ಮತ್ತು ಸಹೋದರ ಕೆ.ಟಿ. ರಾಮರಾವ್ ಗೆ ಸೆಡ್ಡು ಹೊಡೆದ ಕವಿತಾ ಈ ಹಿಂದೆ ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಡಿ ಜೈಲು ಸೇರಿದ್ದರು. ಅಬಕಾರಿ ಹಗರಣದಿಂದ ಕ್ಲೀನ್ ಚಿಟ್ ಪಡೆದುಕೊಂಡು ಹೊರಬಂದಿದ್ದಾರೆ. ಪಕ್ಷದ ವಿಚಾರದ ಬಗ್ಗೆ ತಂದೆ ಮತ್ತು ಸಹೋದರನ ನಡುವೆ ಕಲಹ ಉಂಟಾಗಿತ್ತು. ಕಲಹದಿಂದ ಬೇಸತ್ತು ಬಿ.ಆರ್.ಎಸ್. ಪಕ್ಷದಿಂದ ಅವರು ಹೊರಬಂದಿದ್ದರು. ಬಿ.ಆರ್.ಎಸ್. ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದರು.

