ವಿದೇಶದಲ್ಲಿ ನೆಲೆಸಿರುವ ಗ್ಯಾಂಗ್’ಸ್ಟರ್ ಒಬ್ಬನಿಂದ ತಮಗೆ 10 ಕೋಟಿ ರೂಪಾಯಿ ಸುಲಿಗೆಯ ಬೆದರಿಕೆ ಬಂದಿದೆ ಎಂದು ಪಂಜಾಬಿ ನಟಿ ಹಿಮಾಂಶಿ ಖುರಾನಾ ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟಿಯ ದೂರಿನ ಆಧಾರದ ಮೇಲೆ ಎಫ್ಐಆರ್ (FIR) ದಾಖಲಿಸಿರುವುದಾಗಿ ಮೊಹಾಲಿ ಪೊಲೀಸರು ತಿಳಿಸಿದ್ದಾರೆ. ತಮ್ಮ ಇಮೇಲ್ ಐಡಿಗೆ ಬಂದಿರುವ ಸುಲಿಗೆಯ ಇಮೇಲ್ ಕುರಿತು ಖುರಾನಾ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನ ಮೇಲೆ ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು, ಶನಿವಾರ ಸೋಹಾನಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 308(4) (ಸುಲಿಗೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧೀಕ್ಷಕ (ತನಿಖೆ) ಸೌರವ್ ಜಿಂದಾಲ್, “ದೂರಿನ ಪ್ರಕಾರ, ಇಮೇಲ್ನಲ್ಲಿ ಧ್ವನಿ ಸಂದೇಶವೊಂದಿದ್ದು (voice note), ವಿದೇಶ ಮೂಲದ ಗ್ಯಾಂಗ್ಸ್ಟರ್ ಒಬ್ಬರು 10 ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ,” ಎಂದಿದ್ದಾರೆ. ಇಮೇಲ್ ಮತ್ತು ಧ್ವನಿ ಸಂದೇಶದ ಮೂಲವನ್ನು ಪತ್ತೆಹಚ್ಚುವ ಪ್ರಯತ್ನ ಸೇರಿದಂತೆ ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಮತ್ತು ಮಾಡೆಲ್ ಆಗಿರುವ ಖುರಾನಾ, 2013ರ ಪಂಜಾಬಿ ಚಿತ್ರ ‘ಸಡ್ಡಾ ಹಕ್’ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಅನೇಕ ಮ್ಯೂಸಿಕ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಜನಪ್ರಿಯ ರಿಯಾಲಿಟಿ ಶೋ “ಬಿಗ್ ಬಾಸ್” ನ 13ನೇ ಸೀಸನ್ನಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು.
ಬಿಗ್ ಬಾಸ್ 13 ಖ್ಯಾತಿಯ ನಟಿ ಹಿಮಾಂಶಿ ಖುರಾನಾ ಅವರು ತಮ್ಮ ಮನಮೋಹಕ ಮತ್ತು ಸ್ಟೈಲಿಶ್ ಚಿತ್ರಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಾರೆ. ಪಂಜಾಬಿ ಚಿತ್ರರಂಗದ ಜನಪ್ರಿಯ ನಟಿಯಾಗಿರುವ ಹಿಮಾಂಶಿ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಗಾಗ್ಗೆ ಹಂಚಿಕೊಳ್ಳುವ ಫ್ಯಾಷನೇಬಲ್ ಮತ್ತು ಬೋಲ್ಡ್ ಫೋಟೋಶೂಟ್ಗಳು ನೆಟ್ಟಿಗರನ್ನು ಆಕರ್ಷಿಸುತ್ತವೆ.

