ತುಮಕೂರು: ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 15 ಯುವಕರಿಂದ ಲಕ್ಷ ಲಕ್ಷ ಹಣ ಪಡೆದು ತರಬೇತ್ ನೆಪದಲ್ಲಿ ತೋಟದ ಮನೆಯಲ್ಲಿ ಇರಿಸಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ.
ವಂಚಕರು ಅರಣ್ಯ ಇಲಾಖೆಯ ಮೇಲಾಧಿಕಾರಿಯ ನಕಲಿ ಲೆಟರ್ ಹೆಡ್ ಬಳಸಿ ಮೈಸೂರಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 15 ಯುವಕರಿಂದ 3-5 ಲಕ್ಷದವರೆಗೂ ಹಣ ಪಡೆದಿದ್ದಾರೆ.
ಯುವಕರಿಗೆ ನಕಲಿ ಆದೇಶ ಪತ್ರವನ್ನು ನೀಡಿ, ನಕಲಿ ತರಬೇತಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ತುಮಕೂರಿನ ವಡ್ಡರಹಳ್ಳಿಯ ತೋಟದ ಮನೆಯೊಂದರಲ್ಲಿ ತರಬೇತಿ ನೆಪದಲ್ಲಿ ಯುವಕರನ್ನು ಇರಿಸಲಾಗಿದೆ. ಅರಣ್ಯ ಇಲಾಖೆ ನೇಮಕಾತಿಗೆ ತರಬೇತಿ ಎಂಬ ಸುದ್ದಿ ಕೇಳಿ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಯುವಕರನ್ನು ರಕ್ಷಿಸಿದ್ದಾರೆ. ಹಣ ಕಳೆದುಕೊಂಡ ಯುವಕರು ನಕಲಿ ತರಬೇತಿ ಎಂಬುದು ತಿಳಿದು ಕಂಗಾಲಾಗಿದ್ದಾರೆ.

