ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಸುಂಕ ವಿಧಿಸುವ ನೂತನ ಪದ್ದತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಆಸ್ಟ್ರೇಲಿಯಾ, ಯುರೋಪ್ ನಲ್ಲಿ ಚಾಲ್ತಿಯಲ್ಲಿರುವ ಆಲ್ಕೋಹಾಲ್ ಇನ್ ಬಿವರೇಜ್(ಎಐಬಿ) ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಗೋಲ್ಡ್ ಸ್ಟ್ಯಾಂಡರ್ಡ್ ಎಂದು ಪರಿಗಣಿಸಲಾಗಿದೆ. ಈ ಹೊಸ ನೀತಿಯ ಪ್ರಕಾರ ಮದ್ಯದ ಬಾಟಲಿಯಲ್ಲಿ ಇರುವ ಆಲ್ಕೋಹಾಲ್ ಅಂಶ ಆಧರಿಸಿ ತೆರಿಗೆ ನಿಗದಿಪಡಿಸಲಾಗುವುದು. ಈ ಮೂಲಕ ಆಲ್ಕೋಹಾಲ್ ಇನ್ ಬಿವರೇಜ್ ಆಧಾರಿತ ತೆರಿಗೆ ವ್ಯವಸ್ಥೆ ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ ಆಗಲಿದೆ.
ಅಬಕಾರಿ ಇಲಾಖೆಯ ಆದಾಯ ಹೆಚ್ಚಳ, ಅಬಕಾರಿ ಉದ್ಯಮದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ಸ್ಪರ್ಧಾತ್ಮಕತೆ ಮೂಲಕ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್ 71ರ ಅಡಿ ಆಲ್ಕೋಹಾಲ್ ಇನ್ ಬಿವರೇಜ್ ಪದ್ಧತಿ ಜಾರಿಗೊಳಿಸುತ್ತಿದೆ. ಅಧಿಸೂಚನೆ ಪ್ರಕಟಿಸಲಾಗಿದ್ದು ಸಾರ್ವಜನಿಕರ ಅಭಿಪ್ರಾಯ ಆಕ್ಷೇಪಣೆ ಸಲ್ಲಿಸಲು ಏಳು ದಿನ ಕಾಲಾವಕಾಶ ನೀಡಲಾಗಿದೆ. ನಂತರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರೀಮಿಯಂ ಲಿಕ್ಕರ್ ಗೆ ಉತ್ತೇಜನ ನೀಡುವ ಉದ್ದೇಶದಿಂದ ಆಲ್ಕೋಹಾಲ್ ಇನ್ ಬಿವರೇಜ್ ಪದ್ಧತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಮದ್ಯದ ಮಾರಾಟ ಶೇಕಡ 90ರಷ್ಟು ಇದೆ. ಪ್ರೀಮಿಯಂ ಬ್ರಾಂಡ್ ಲಿಕ್ಕರ್ ದುಬಾರಿ ಮದ್ಯಗಳ ಮಾರಾಟ ಶೇಕಡ 10 ರಷ್ಟು ಇದೆ. ಸರ್ಕಾರ ಮದ್ಯ ಮಾರಾಟದ ಮೇಲೆ ಈಗಾಗಲೇ ತೆರಿಗೆ, ಹೆಚ್ಚುವರಿ ತೆರಿಗೆ ವಿಧಿಸಿ ದರ ಗರಿಷ್ಠ ಪ್ರಮಾಣ ತಲುಪಿದೆ. ಇನ್ನೂ ತೆರಿಗೆ ವಿಧಿಸುವುದು ಕಷ್ಟಸಾಧ್ಯ. ಹೀಗಾಗಿ ಆಲ್ಕೋಹಾಲ್ ಇನ್ ಬಿವರೇಜ್ ಮಾಡುವ ಮೂಲಕ ಗ್ರಾಹಕರನ್ನು ಪ್ರೀಮಿಯಂ ಬ್ರಾಂಡ್ ಗಳ ಮದ್ಯ ಸೇವನೆಗೆ ಪ್ರೋತ್ಸಾಹಿಸುವ ಉದ್ದೇಶವಿದೆ.
ಸದ್ಯ ಚಾಲ್ತಿಯಲ್ಲಿರುವ ಪ್ರಮಾಣ ಆಧಾರಿತ ತೆರಿಗೆ ವ್ಯವಸ್ಥೆ ಬದಲಾಯಿಸಿ ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ ವಿಧಿಸಲಾಗುವುದು. ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ಅಗ್ಗದ ಬೆಲೆಯ ವಿಸ್ಕಿ, ರಮ್, ಬ್ರಾಂಡಿ ಸೇರಿದಂತೆ ದೇಶಿಯ ಮದ್ಯಗಳ ದರ ಶೇಕಡ 20ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ಆಧಾರದ ಮೇಲೆ ವಿವಿಧ ಸ್ಲ್ಯಾಬ್ ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಪ್ರಸ್ತುತ ಇರುವ ಮದ್ಯದ 16 ಸ್ಲ್ಯಾಬ್ ಗಳನ್ನು ಹೊಸ ವ್ಯವಸ್ಥೆಯಲ್ಲಿ ಎಂಟು ಸ್ಲ್ಯಾಬ್ ಗಳಿಗೆ ಇಳಿಕೆ ಮಾಡಲಾಗುವುದು. ನಂತರ ಸ್ಲ್ಯಾಬ್ ಪದ್ಧತಿಯನ್ನು ಕೈ ಬಿಟ್ಟು ಉತ್ಪಾದಕರಿಗೆ ದರ ನಿಗದಿ ಅಧಿಕಾರ ನೀಡಲಾಗುವುದು. ಇದರಿಂದ ಉತ್ಪಾದಕರ ನಡುವೆ ಸ್ಪರ್ಧೆ ಏರ್ಪಟ್ಟು ದರ ನಿಗದಿಯಲ್ಲಿ ಪೈಪೋಟಿ ಉಂಟಾಗಲಿದೆ. ಗ್ರಾಹಕರಿಗೆ ವಿವಿಧ ಮಾದರಿಯ ಮದ್ಯ ಸಿಗಲಿದ್ದು, ಸರ್ಕಾರಕ್ಕೆ ಆದಾಯ ಬರಲಿದೆ.
ಪ್ರಸ್ತುತ ಇರುವ ವಿವಿಧ ಸ್ಲ್ಯಾಬ್ ಗಳಲ್ಲಿ ಮೊದಲ ನಾಲ್ಕು ಸ್ಲ್ಯಾಬ್ ಗಳ ಮದ್ಯಗಳು ಹೆಚ್ಚು ದುಬಾರಿಯಾಗಿವೆ. ಕಡಿಮೆ ದರದ ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಶೇಕಡ 42.8ರಷ್ಟು ಇರುತ್ತದೆ. ಮೊದಲ ನಾಲ್ಕು ಸ್ಲ್ಯಾಬ್ ಗಳ ಮದ್ಯಗಳು ಅಬಕಾರಿ ಆದಾಯದಲ್ಲಿ 80ರಷ್ಟು ಪಾಲು ಹೊಂದಿವೆ. ಕಳೆದ ವರ್ಷ 180 ಮಿ.ಲೀ. ಮದ್ಯದ ಬೆಲೆ 80 ರಿಂದ 95 ರೂ.ಗೆ ಏರಿಕೆಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯಲ್ಲಿ 105 ರಿಂದ 110 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಕಡಿಮೆ ಆದಾಯದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಉದ್ಯಮದ ಮೇಲೆಯೂ ಪರಿಣಾಮ ಉಂಟಾಗಲಿದೆ ಎಂದು ಹೇಳಲಾಗಿದೆ.

