ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಕಾಲುಸಂಕವೊಂದು ಕುಸಿದು ಬಿದ್ದು ಎಂಟು ಮಂದಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಘಟನೆಯ ವಿವರ: ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕಾಗಿ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಕಹಳೆ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯು ಕಾಲುಸಂಕದ ಮೇಲೆ ಸಾಗುತ್ತಿದ್ದಾಗ, ಸಂಕವು ಏಕಾಏಕಿ ಕುಸಿದಿದೆ. ಇದರ ಪರಿಣಾಮವಾಗಿ ಪಲ್ಲಕ್ಕಿ ಉರುಳಿ ಬಿದ್ದು ಅದರಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ.
ಗಾಯಾಳುಗ ಳು: ಈ ಅವಘಡದಲ್ಲಿ ಪಲ್ಲಕ್ಕಿ ಹೊತ್ತಿದ್ದವರು ಸೇರಿದಂತೆ ಒಟ್ಟು ಎಂಟು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ ಮಾರೂರು ಮತ್ತು ಲೋಕೇಶ್ ಭಂಡಾರಿ ಸೇರಿದ್ದಾರೆ. ಕಾಲುಸಂಕ ಮುರಿದು ಬಿದ್ದಾಗ ಅದರ ಕಲ್ಲಿನ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದಿದ್ದರಿಂದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಧಾರ್ಮಿಕ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಭಕ್ತರಲ್ಲಿ ಈ ಘಟನೆ ಆತಂಕ ಮೂಡಿಸಿದೆ.

