ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ವಿಮಾನ ಸಂಸ್ಥೆ ಮುಂದಾಗಿದ್ದು, ಅಕ್ಟೋಬರ್ 1ರಿಂದ ಸೇವೆ ಪುನರಾರಂಭವಾಗಲಿದೆ.
ಈ ಹಿಂದೆ ಇಂಡಿಗೋ ವಿಮಾನ ಸಂಸ್ಥೆಯ ವಿಮಾನ ಸೇವೆ ಇತ್ತು. ಪೈಲೆಟ್ ಗಳು ಹಾಗೂ ವಿಮಾನಗಳ ಕೊರತೆಯ ಕಾರಣಕ್ಕೆ ಮೇ 1 ರಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ವಿಮಾನ ಸಂಚಾರ ಪುನಾರಂಭಿಸಲು ಕೆಎಸ್ಐಐಡಿಸಿ ಪ್ರಯತ್ನ ನಡೆಸಿದ್ದು, ಸ್ಟಾರ್ ಏರ್ ಸಂಸ್ಥೆ ಸ್ಪಂದಿಸಿದೆ.
ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್ ಗೆ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದ ಸ್ಪೈಸ್ ಜೆಟ್ ಸಂಸ್ಥೆಯು ಜೂನ್ 9 ರಂದು ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿದ್ದು, ಸೆಪ್ಟೆಂಬರ್ ನಿಂದ ಮತ್ತೆ ವಿಮಾನ ಹಾರಾಟ ಆರಂಭಿಸಲು ಮುಂದಾಗಿದೆ. ಆದರೆ ದಿನಾಂಕ ಇನ್ನು ನಿಗದಿಪಡಿಸಿಲ್ಲ.
ಶಿವಮೊಗ್ಗ- ಬೆಂಗಳೂರು ಮಧ್ಯೆ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ ಮುಂದೆ ಬಂದಿದೆ. ಪರವಾನಿಗೆಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದ್ದು, ಅಕ್ಟೋಬರ್ 1ರಿಂದ ಸೇವೆ ಪುನರಾರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಟವರ್ ಅಳವಡಿಕೆ ಕಾರ್ಯ ಆರಂಭವಾಗಬೇಕಿದೆ. ನಂತರ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

