ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಶಾಂತಿ ಸಮಿತಿ ಸದಸ್ಯರ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದ ಸಂದರ್ಭದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತು ಮಂದಿ ಗಾಯಗೊಂಡಿದ್ದಾರೆ.
ಖುರೇಷಿ ಮೋರ್ ಬಳಿಯ ಶಾಂತಿ ಸಮಿತಿ ಮುಖ್ಯಸ್ಥ ನೂರ್ ಅಲಮ್ ಮೆಹ್ಸೂದ್ ಅವರ ನಿವಾಸದಲ್ಲಿ ನಡೆದ ವಿವಾಹ ಸಮಾರಂಭದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಸಜ್ಜದ್ ಅಹ್ಮದ್ ಸಾಹಿಬ್ಜಾದಾ ದೃಢಪಡಿಸಿದ್ದಾರೆ.
ದಾಳಿ ನಡೆದಾಗ ಅತಿಥಿಗಳು ನೃತ್ಯ ಮಾಡುತ್ತಿದ್ದರು. ಸ್ಫೋಟದಿಂದಾಗಿ ಕೋಣೆಯ ಛಾವಣಿ ಕುಸಿದು ಬಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ತಲುಪಲು ಕಷ್ಟವಾಯಿತು. ಖೈಬರ್ ಪಖ್ತುಂಖ್ವಾ ರಕ್ಷಣಾ ವಕ್ತಾರ ಬಿಲಾಲ್ ಅಹ್ಮದ್ ಫೈಜಿ, ಐದು ಶವಗಳು ಮತ್ತು 10 ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಂತಿ ಸಮಿತಿಯ ನಾಯಕ ವಹೀದುಲ್ಲಾ ಮೆಹ್ಸೂದ್, ಅಲಿಯಾಸ್ ಜಿಗ್ರಿ ಮೆಹ್ಸೂದ್ ಮೃತಪಟ್ಟಿದ್ದು, ಅಧಿಕಾರಿಗಳು ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.

