ಬೆಂಗಳೂರು: ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ 60 ವರ್ಷದ ಉಬರ್ ಕ್ಯಾಬ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 30 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದ್ದು, ಕ್ಯಾಬ್ ಪ್ರಯಾಣದ ವೇಳೆ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಜೂನ್ 21ರ ರಾತ್ರಿ ಮಹಿಳೆ ಕೊರಮಂಗಲದ ರೆಸ್ಟೋರೆಂಟ್‌ನಿಂದ ತನ್ನ ನಿವಾಸಕ್ಕೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಇಂಡಿಯನ್ ಕ್ರಿಶ್ಚಿಯನ್ ಸಮಾಧಿ ಪ್ರದೇಶದ ಬಳಿ ಅವರು ಕೊಂಬುಚಾ (Kombucha) ಪಾನೀಯದ ಬಾಟಲಿಯನ್ನು ತೆರೆದಿದ್ದಾರೆ.
ಆದರೆ, ಚಾಲಕ ಪರಮೇಶ್ವರ್ ಆ ಪಾನೀಯವನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿ, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದವೂ ನಡೆದಿದೆ.ಮಹಿಳೆಯು ಹಲವು ಬಾರಿ ವಾಹನವನ್ನು ನಿಲ್ಲಿಸಿ ತನ್ನನ್ನು ಇಳಿಸುವಂತೆ ಕೇಳಿಕೊಂಡರೂ, ಚಾಲಕ ಕಾರನ್ನು ನಿಲ್ಲಿಸದೆ ಮುಂದುವರಿದಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಮಹಿಳೆ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ಹೊರಬರಲು ಯತ್ನಿಸಿದ್ದಾರೆ.
ಈ ವೇಳೆ ಚಾಲಕ ಮಹಿಳೆಯ ಕೈ ಹಿಡಿದು ಮತ್ತೆ ಕಾರಿನೊಳಗೆ ಎಳೆದು ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮಹಿಳೆ ಹೇಗೋ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿದ್ದು, ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಶೋಕ್ ನಗರ ಪೊಲೀಸರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಇತ್ತೀಚೆಗೆ ಮತ್ತೊಂದು ಘಟನೆ
ಕಳೆದ ವಾರವೂ ಬೆಂಗಳೂರಿನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಶಾಂತಿನಗರ ನಿವಾಸಿಯಾದ 42 ವರ್ಷದ ಕ್ಯಾಬ್ ಚಾಲಕನನ್ನು 27 ವರ್ಷದ ಅಸ್ಸಾಂ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಗೃಹ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ನಾರಾಯಣಪುರದಿಂದ ತನ್ನ ಊರಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಮಧ್ಯರಾತ್ರಿ 12.30ರಿಂದ 1.40ರ ನಡುವೆ ಅವಲಹಳ್ಳಿ ಸಮೀಪ ಚಾಲಕ ವಾಹನವನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಮಹಿಳೆಯೊಂದಿಗೆ ಅನಗತ್ಯ ದೈಹಿಕ ಸಂಪರ್ಕ ಸಾಧಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

