ಕರ್ನಾಟಕದ ವಾಹನದಲ್ಲಿ ಅಕ್ಕಪಕ್ಕದ ರಾಜ್ಯಗಳಿಗೆ ಹೋಗುವ ಮಾಲೀಕರು/ ಚಾಲಕರು ಗಮನಿಸಿ. ಹೊರ ರಾಜ್ಯಗಳಲ್ಲಿ ಕರ್ನಾಟಕದ ನೋಂದಣಿ ವಾಹನಗಳಿಗೆ 10,000 ರೂ. ದಂಡವನ್ನು ವಿಧಿಸಲಾಗುತ್ತಿದೆ.
ಭಾರತದ ಎಲ್ಲಾ ವಾಹನಗಳಿಗೆ ಮಾನ್ಯವಾದ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಒಡಿಸ್ಸಾ, ಗೋವಾ ರಾಜ್ಯಗಳಲ್ಲಿ ಈ ಪ್ರಮಾಣ ಪತ್ರವನ್ನು ಪತ್ತೆ ಹಚ್ಚಲು ಎಐ ಮಾದರಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆದರೆ ಕರ್ನಾಟಕದ ಕೆಲವು ವಾಹನಗಳ ಪ್ರಮಾಣ ಪತ್ರದ ಅವಧಿ ಮುಗಿದಿದೆ ಎಂದು 10,000 ರೂ. ದಂಡವನ್ನು ಹಾಕಲಾಗುತ್ತಿದೆ.
ಮಾಹಿತಿಗಳ ಪ್ರಕಾರ ಕರ್ನಾಟಕದ ಹಲವು ವಾಹನಗಳು ಕೇಂದ್ರ ಸರ್ಕಾರದ ವಾಹನ (ಪರಿವಾಹನ) ಪೋರ್ಟಲ್‌ನಲ್ಲಿ ನೋಂದಣಿಯಾಗಿಲ್ಲ. ಆದ್ದರಿಂದ ಆ ವಾಹನಗಳನ್ನು ಪ್ರಮಾಣ ಪತ್ರಕ್ಕಾಗಿ ಬೇರೆ ರಾಜ್ಯಗಳಲ್ಲಿ ಹಿಡಿದಾಗ ದಂಡ ಕಟ್ಟಬೇಕಾಗಿದೆ.
ಕರ್ನಾಟಕ ಸರ್ಕಾರ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರವನ್ನು ನೀಡಲು ಪ್ರತ್ಯೇಕವಾದ etc.karnataka.gov.in ಎಂಬ ಪೋರ್ಟಲ್ ನಿರ್ವಹಣೆ ಮಾಡುತ್ತದೆ. ಆದರೆ ಇದು ಕೇಂದ್ರ ಸರ್ಕಾರದ ವಾಹನ (ಪರಿವಾಹನ) ಪೋರ್ಟ್‌ಲ್ ಜೊತೆ ಲಿಂಕ್ ಆಗಿಲ್ಲ. ಆದ್ದರಿಂದ ನಿಮ್ಮ ವಾಹನ ಪ್ರಮಾಣ ಪತ್ರ ಹೊಂದಿದ್ದರೂ ಸಹ ಬೇರೆ ರಾಜ್ಯದಲ್ಲಿ ಅದು ಮಾನ್ಯ ವಾಗುತ್ತಿಲ್ಲ.
ಗೋವಾ, ಒಡಿಶಾ ರಾಜ್ಯದಲ್ಲಿ ನಿಮ್ಮ ವಾಹನ ಸಂಚಾರ ನಡೆಸಿದರೆ ಎಐ ಕ್ಯಾಮರಾ ಮೂಲಕ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರ ಹೊಂದಿಲ್ಲ ಎಂದು ಚಲನ್ ಸಿದ್ಧವಾಗುತ್ತಿದೆ. ಅದು ಮಾಲೀಕರ ಹೆಸರಿಗೆ ಬರುತ್ತಿದೆ. ಆದ್ದರಿಂದ ದಂಡ ಕಟ್ಟಬೇಕಿದೆ.
ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರವನ್ನು ಹೊಂದಿಲ್ಲ ಎಂದರೆ 10 ರಿಂದ 20 ಸಾವಿರ ರೂ. ತನಕ ದಂಡವನ್ನು ವಿಧಿಸುವ ನಿಯಮವಿದೆ. ಮೋಟಾರು ವಾಹನ ಕಾಯ್ದೆ ಅಡಿ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರ ಹೊಂದಿಲ್ಲದ ವಾಹನಕ್ಕೆ 10,000 ರೂ. ದಂಡವನ್ನು ಹಾಕಲಾಗುತ್ತಿದೆ.
ಕರ್ನಾಟಕದ ವಾಹನಗಳ ಮಾಲೀಕರು/ ಚಾಲಕರು ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರವಿದೆ ಎಂದು ಅದನ್ನು ತೋರಿಸಿದರೆ ಕೇಂದ್ರದ ವಾಹನ (ಪರಿವಾಹನ) ಪೋರ್ಟಲ್ ಇದು ಮಾನ್ಯತೆ ಪಡೆದಿಲ್ಲ ಎಂದು ತೋರಿಸುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.
ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗಮನವನ್ನು ಸೆಳೆಯಲಾಗಿದೆ. ಅವರು ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಸಾರಿಗೆ ಇಲಾಖೆಯ ಯಾವುದೇ ಅಧಿಕಾರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಬೆಂಗಳೂರಿನ ಕಾರು ಮಾಲೀಕರೊಬ್ಬರು ಬೆಂಗಳೂರು ನಗರಿಂದ ಒಡಿಶಾಕ್ಕೆ ಪ್ರಯಾಣಿಸಿದ್ದರು. ಕಳೆದ ವಾರ ಅವರ ಕಾರಿಗೆ ಒಡಿಶಾದಲ್ಲಿ 20,000 ರೂ. ದಂಡವನ್ನು ಹಾಕಲಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 2026ರ ಡಿಸೆಂಬರ್ ತನಕ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರದ ಅವಧಿ ಇದೆ. ಆದರೂ ದಂಡ ಹಾಕಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಒಡಿಶಾದ ಟೋಲ್‌ಗಳಲ್ಲಿ ಎಐ ಆಧಾರಿತನ ಕ್ಯಾಮರಾಗಳನ್ನು ಹಾಕಲಾಗಿದೆ. ಇಲ್ಲಿ ಕರ್ನಾಟಕ ನೋಂದಣಿ ವಾಹನಗಳು ಸಂಚಾರ ನಡೆಸಿದರೆ ಚಲನ್ ಮೂಲಕ ದಂಡದ ಮಾಹಿತಿ ಬರುತ್ತಿದೆ.
ಕರ್ನಾಟಕದ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರ ಬೇರೆ ರಾಜ್ಯದಲ್ಲಿ ಮಾನ್ಯತೆ ಹೊಂದಿಲ್ಲ ಎಂದರೆ ಜನರು ಏನು ಮಾಡಬೇಕು?, ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ವಾಹನ ಮಾಲೀಕರು/ ಚಾಲಕರು ಒತ್ತಾಯಿಸಿದ್ದಾರೆ.

