HomeKarnatakaಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಿಸ್ತು ಮೀರಿಲ್ಲ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಿಸ್ತು ಮೀರಿಲ್ಲ

ಬೆಂಗಳೂರು- ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಆರ್ಥಿಕ ಹೊಣೆಗಾರಿಕೆಯ ಮಿತಿ ಮೀರಿಲ್ಲ. ರಾಜ್ಯ ಸರ್ಕಾರ ಇದುವರೆಗೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದು, ಮುಂದೆಯೂ ಅದನ್ನು ಮುಂದುವರಿಸಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕಾರ್ಯಕ್ರಮಗಳು ಆರ್ಥಿಕ ಇಲಾಖೆಯ ವ್ಯಾಪ್ತಿಯಲ್ಲಿಯೇ ಬರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗಲೂ ರಾಜ್ಯದ ಆರ್ಥಿಕ ಹೊಣೆಗಾರಿಕೆಯ ಮಿತಿಯನ್ನು ಮೀರಿಲ್ಲ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಕರ್ನಾಟಕ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾರಂಟಿ ಯೋಜನೆಗಳನ್ನು ಆರ್ಥಿಕ ಅಭಿವೃದ್ಧಿಯ ಭಾಗವಾಗಿ ಜಾರಿಗೆ ತರಲಾಗಿದೆ. ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾಭಿಮಾನದ ಬದುಕು ಕಲ್ಪಿಸುವುದು ಹಾಗೂ ಅವರ ದಿನನಿತ್ಯದ ಅಗತ್ಯಗಳಿಗೆ ನೆರವಾಗುವುದು ಯೋಜನೆಗಳ ಉದ್ದೇಶ ಎಂದರು.

ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಬೆಲೆ ಏರಿಕೆ, ಉದ್ಯೋಗ ಸೃಷ್ಟಿ ಹಾಗೂ ಕೋವಿಡ್ ಸಂದರ್ಭದಲ್ಲಿ ಮಾಡಿಕೊಂಡ ಸಾಲದಂತಹ ಸಮಸ್ಯೆಗಳಿವೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಂಕಿ-ಅಂಶಗಳ ಆಧಾರದಲ್ಲಿ ಪರಿಶೀಲಿಸಬೇಕು. ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವುದರಿಂದ ವಾಸ್ತವಾಂಶ ಬದಲಾಗುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಹಾಗೂ ವಿವಿಧ ಯೋಜನೆಗಳ ಹಣ ಬಾಕಿ ಇದೆ ಎಂದು ಆರೋಪಿಸಿದ ಅವರು, 15ನೇ ಹಣಕಾಸು ಆಯೋಗದ ಅನುದಾನ, ವಿದ್ಯಾರ್ಥಿವೇತನ, ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಕೇಂದ್ರ ರಸ್ತೆ ನಿಧಿಗೆ ಸಂಬಂಧಿಸಿದ ಬಿಲ್‌ಗಳು ಬಾಕಿ ಇವೆ. ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವು ಸಂದರ್ಭಗಳಲ್ಲಿ ಕೇಂದ್ರದ ಪಾಲಿನ ಹಣವನ್ನೂ ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ಕುರಿತು ದಾಖಲೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಚರ್ಚಿಸಲಾಗಿದೆ ಎಂದು ಹೇಳಿದರು.

ಏಳು ಮಂದಿಯ ಹತ್ಯೆ ಪ್ರಕರಣ: ತನಿಖೆ ಪೂರ್ಣಗೊಳ್ಳುವವರೆಗೆ ನಿರ್ಧಾರಕ್ಕೆ ಬರುವುದಿಲ್ಲ

ಬೆಂಗಳೂರಿನ ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ; ಪೂರ್ವಯೋಜಿತವಾಗಿ ನಡೆದಿರುವ ಕೃತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿದರು.

ಆರೋಪಿಯ ಮಾನಸಿಕ ಸ್ಥಿತಿ, ಕುಟುಂಬದವರೊಂದಿಗಿನ ಸಂಬಂಧ ಹಾಗೂ ಕೃತ್ಯದ ಹಿಂದಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆತ ತನ್ನ ಪತ್ನಿಯ ಕುಟುಂಬವನ್ನು ಗುರಿಯಾಗಿಸಿಕೊಂಡಿರುವುದು ಕಂಡುಬಂದಿದ್ದು, ತನ್ನ ಮಗಳ ಮೇಲೂ ಪ್ರಭಾವ ಬೀರಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ದೊರೆತಿದೆ. ಆದರೆ ಆಸ್ತಿ ವಿಚಾರವೇ ಕೃತ್ಯಕ್ಕೆ ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ ಎಂದರು.

ಮೃತದೇಹಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೊಂಡೊಯ್ದು ವಿಲೇವಾರಿ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಮುಂದಿನ ಒಂದೆರಡು ದಿನಗಳಲ್ಲಿ ಪ್ರಕರಣದ ಕುರಿತು ಹೆಚ್ಚಿನ ಖಚಿತ ಮಾಹಿತಿ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಆರೋಪಿಯ ಮನೆಯಲ್ಲಿ ಪೊಲೀಸ್ ಅಧಿಕಾರಿಯ ದೂರವಾಣಿ ಸಂಖ್ಯೆ ಪತ್ತೆಯಾಗಿರುವ ವಿಚಾರದ ಕುರಿತು ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳ ಅಧಿಕೃತ ದೂರವಾಣಿ ಸಂಖ್ಯೆಗಳು ಸಾರ್ವಜನಿಕವಾಗಿ ಲಭ್ಯವಿರುತ್ತವೆ. ಅದನ್ನು ಆಧರಿಸಿ ಪೊಲೀಸರ ಸಹಕಾರವಿತ್ತು ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ತನಿಖೆಯ ಸಂಪೂರ್ಣ ವರದಿ ಬಂದ ಬಳಿಕವೇ ಈ ಕುರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

2018ರ ದರೋಡೆ ಪ್ರಕರಣದಲ್ಲಿ ಆರೋಪಿಯ ಬಂಧನವಾಗಿದ್ದ ವಿಚಾರವೂ ತನಿಖೆಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದರು.

ಎಸ್‌ಐಆರ್ ಕುರಿತು ದೆಹಲಿಯಲ್ಲಿ ಚರ್ಚೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಇಂಡಿಯಾ ಒಕ್ಕೂಟದ ಸಭೆ ನಡೆಯಲಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಕೇಂದ್ರ ಚುನಾವಣಾ ಆಯೋಗದ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಏನು ಚರ್ಚಿಸಲಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ

ತಮ್ಮ ವಿದ್ಯಾರ್ಹತೆ ಕುರಿತು ಟೀಕೆ ಮಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ವಿದ್ಯಾರ್ಹತೆಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ನಮೂದಿಸಿದ್ದೇನೆ. ಛಲವಾದಿ ನಾರಾಯಣಸ್ವಾಮಿ ಬಯಸುವ ಯಾವುದೇ ವಿಷಯದ ಬಗ್ಗೆ ಯಾವುದೇ ಭಾಷೆಯಲ್ಲಿ ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.

ತಾನು ಇಂಗ್ಲಿಷ್, ಕನ್ನಡ ಹಾಗೂ ಹಿಂದಿಯಲ್ಲಿ ಮಾತನಾಡಬಲ್ಲೆ. ಸಂಸ್ಕೃತ ಓದಲು ಬರುತ್ತದೆ ಹಾಗೂ ತಾನು ಗ್ರಾಫಿಕ್ ಡಿಸೈನರ್ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆಯ ಕುರಿತು ಆರ್‌ಟಿಐ ಮೂಲಕ ಮಾಹಿತಿ ಕೇಳಿದರೂ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.

‘ಹಳ್ಳಿ ಗುಗ್ಗು’ ಎಂಬ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಹೇಳಿಕೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ ಎಂದು ಹೇಳುತ್ತಿರುವವರ ಬಗ್ಗೆ ಪ್ರಶ್ನೆ ಎತ್ತಿದರು.

ಕುಮಾರಸ್ವಾಮಿ ವಿರುದ್ಧವೂ ತೀವ್ರ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ವಿರುದ್ಧ ಐಟಿ ಹಾಗೂ ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವಂತೆ ಯಾರಾದರೂ ಒತ್ತಡ ಹೇರುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿವೆ. ಈ ಎಲ್ಲ ವಿಚಾರಗಳ ಸತ್ಯ ಮುಂದೊಂದು ದಿನ ಹೊರಬರಲಿದೆ ಎಂದು ಹೇಳಿದರು.

ತಮ್ಮ ವಿರುದ್ಧ ಯಾರೇ ಆರೋಪ ಮಾಡಿದರೂ ಮೌನವಾಗಿ ಕುಳಿತುಕೊಳ್ಳುವುದಿಲ್ಲ. ತಮಗೂ ಸ್ವಾಭಿಮಾನವಿದೆ. ಜನರು ತಮ್ಮನ್ನೂ ಚುನಾಯಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಗಂಭೀರ ರಾಜಕಾರಣಿ ಅಲ್ಲ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಅಧಿಕಾರದಲ್ಲಿದ್ದಾಗ ಒಂದು ರೀತಿಯಲ್ಲಿ ಹಾಗೂ ಅಧಿಕಾರದಿಂದ ಹೊರಗಿದ್ದಾಗ ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹಿಂದಿನ ಹೇಳಿಕೆಗಳನ್ನೂ ಉಲ್ಲೇಖಿಸಿದ ಅವರು, ರಾಜಕೀಯವಾಗಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ವಿರುದ್ಧದ ಹೇಳಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ತಮ್ಮ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ಉಲ್ಲೇಖಿಸಿ, ಅದು ಹೊಸ ವಿಚಾರವೇನಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular