ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿಶೇಷ ಸೂಚನೆ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.
ನವೆಂಬರ್ 6 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಈ ಅದ್ದೂರಿ ಉತ್ಸವದಲ್ಲಿ ಕರ್ನಾಟಕ ಹಾಗೂ ನೆರೆಯ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಐದು ದಿನಗಳ ಪೂಜಾ ಕಾರ್ಯಕ್ರಮಗಳ ವಿವರ
ನವೆಂಬರ್ 6 (ಶುಕ್ರವಾರ): ದೀಪಾವಳಿ ಜಾತ್ರಾ ಮಹೋತ್ಸವಾರಂಭ.
ನವೆಂಬರ್ 7: ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಪೂಜೆ ಮತ್ತು ವಿಶೇಷ ಉತ್ಸವ.
ನವೆಂಬರ್ 8: ನರಕ ಚತುರ್ದಶಿ ಪ್ರಯುಕ್ತ ವಿಶೇಷ ಸೇವೆಗಳು.
ನವೆಂಬರ್ 9: ದೀಪಾವಳಿ ಅಮಾವಾಸ್ಯೆಯಂದು ಬೆಳಿಗ್ಗೆ 9:30ರ ನಂತರ ಧಾರ್ಮಿಕ ‘ಹಾಲರುವೆ ಉತ್ಸವ’.
ನವೆಂಬರ್ 10: ಬೆಳಿಗ್ಗೆ 7:30 ರಿಂದ 8:40 ರ ಶುಭ ಲಗ್ನದಲ್ಲಿ ವೈಭವದ ದೀಪಾವಳಿ ‘ಮಹಾರಥೋತ್ಸವ’.
ಜಾತ್ರೆಯ ಪ್ರತಿದಿನ ಬೆಳಿಗ್ಗೆ 6:30 ರಿಂದ ಸಂಜೆ 6:30 ರವರೆಗೆ ಹಾಗೂ ರಾತ್ರಿ 8:30 ರಿಂದ ರಾತ್ರಿ ಬೀಗಮುದ್ರೆ ಹಾಕುವವರೆಗೆ ಭಕ್ತರಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಟ್ಟದಲ್ಲಿ ತೀವ್ರ ವಾಹನ ದಟ್ಟಣೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಚಾಮರಾಜನಗರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ನವೆಂಬರ್ 6 ರ ಸಂಜೆ 6 ಗಂಟೆಯಿಂದ ನವೆಂಬರ್ 10 ರ ಸಂಜೆ 6 ಗಂಟೆಯವರೆಗೆ ಬೆಟ್ಟಕ್ಕೆ ದ್ವಿಚಕ್ರ ವಾಹನಗಳು (ಬೈಕ್) ಹಾಗೂ ಆಟೋಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬೈಕ್ ಮತ್ತು ಆಟೋಗಳಲ್ಲಿ ಬರುವ ಭಕ್ತರು ತಮ್ಮ ವಾಹನಗಳನ್ನು ಕೌದಳ್ಳಿ ಗ್ರಾಮದಲ್ಲಿ ಗುರುತಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಅಲ್ಲಿಂದ ಬಸ್ಗಳ ಮೂಲಕ ಬೆಟ್ಟಕ್ಕೆ ತೆರಳಲು ಸೂಚಿಸಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ 350ಕ್ಕೂ ಹೆಚ್ಚು ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದೆ. ಚಾಮರಾಜನಗರ, ಕೊಳ್ಳೇಗಾಲ, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

