ಬೆಳಗಾವಿ(ಸುವರ್ಣಸೌಧ): ಪಾರಿವಾಳಗಳಿಂದ ಉಂಟಾಗುತ್ತಿರುವ ಮಾರಣಾಂತಿಕ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಬೇಕು. ಆಹಾರ ಹಾಕುವವರಿಗೆ ದಂಡ ವಿಧಿಸುವಂತೆ ಆರೋಗ್ಯ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ವಿವಿಧ ಪಾಲಿಕೆಗಳು, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಯಾರೂ ಕೂಡ ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬಾರದು. ಪಾರಿವಾಳದ ಪುಕ್ಕದಿಂದ ತೀವ್ರ ಉಸಿರಾಟ ಸಮಸ್ಯೆ ಉಂಟು ಮಾಡುವ ಸೋಂಕು ಹರಡುತ್ತದೆ. ಬಾಂಬೆ ಹೈಕೋರ್ಟ್ ಕೂಡ ಇದನ್ನು ಹೇಳಿದೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕರು ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.
ಸೀಮಿತ ಸ್ಥಳಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ಪಾರಿವಾಳಗಳಿಗೆ ಫೀಡ್ ಮಾಡಬೇಕು. ಸೀಮಿತ ಅವಧಿಯಲ್ಲಿ ಮಾತ್ರ ಆಹಾರ ನೀಡಬೇಕು. ಈ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಬಹುದು ಎಂದು ಹೇಳಲಾಗಿದೆ.

