ಬೆಂಗಳೂರು: ವಿಜಯಪುರ ಮತ್ತು ಬೆಂಗಳೂರು ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗವಾಗಿ ರೈಲು ಸಂಚಾರ ಕಲ್ಪಿಸಬೇಕೆಂಬ ಸಚಿವ ಎಂ.ಬಿ. ಪಾಟೀಲ್ ಅವರ ಮನವಿಗೆ ರೈಲ್ವೆ ಇಲಾಖೆ ಸ್ಪಂದಿಸಿದೆ. ಜೂನ್ 28 ರ ವರೆಗೆ ವಿಶೇಷ ರೈಲು ಸಂಚಾರ ಆರಂಭಿಸಲು ಮುಂದಾಗಿದೆ.
ಕೇಂದ್ರ ಸರ್ಕಾರದ ಸ್ಪಂದನೆಗೆ ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಹೇಳಿದ್ದಾರೆ.
ಮೇ 16ರಿಂದ ಆರಂಭವಾಗಿ ಮುಂದಿನ 7 ವಾರಾಂತ್ಯಗಳ ಕಾಲ, ಅಂದರೆ ಜೂನ್ 28ರವರೆಗೆ ಯಶವಂತಪುರ–ವಿಜಯಪುರ ವಿಶೇಷ ರೈಲು ಸಂಚಾರ ಆರಂಭವಾಗುತ್ತಿರುವುದು ಉತ್ತರ ಕರ್ನಾಟಕದ ಜನರಿಗೆ ನೆಮ್ಮದಿ ತರಲಿದೆ.
ಹುಬ್ಬಳ್ಳಿ ಪ್ರವೇಶವಿಲ್ಲದೆ ಸಂಚರಿಸಲಿರುವ ಈ ವಿಶೇಷ ರೈಲು, ತುಮಕೂರು, ದಾವಣಗೆರೆ ಸೇರಿದಂತೆ ಆಯ್ದ 9 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿರಲಿದೆ. ಇದರಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಕೇವಲ 11 ಗಂಟೆಗಳಲ್ಲಿ ತಲುಪಬಹುದಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಕುಟುಂಬಗಳ ಪ್ರಯಾಣ ಮತ್ತಷ್ಟು ಸುಗಮ ಮತ್ತು ವೇಗವಾಗಲಿದೆ.
ಶನಿವಾರ ಯಶವಂತಪುರದಿಂದ ಹೊರಡುವ ಈ ರೈಲು, ಭಾನುವಾರ ಸಂಜೆ ವಿಜಯಪುರದಿಂದ ಮರಳಲಿದ್ದು ವಾರಾಂತ್ಯದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಈ ಸೇವೆ ಪ್ರಾಯೋಗಿಕ ಹಂತಕ್ಕೆ ಮಾತ್ರ ಸೀಮಿತವಾಗದೆ, ಬೆಂಗಳೂರು–ವಿಜಯಪುರ ನಡುವಿನ ವೇಗದ ರೈಲು ಸಂಚಾರ ಶಾಶ್ವತ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು. ಕೇವಲ 10 ಗಂಟೆಗಳಲ್ಲಿ ವಿಜಯಪುರ–ಬೆಂಗಳೂರು ಸಂಪರ್ಕ ಕಲ್ಪಿಸುವ ವೇಗದ ರೈಲು ಸೇವೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಮ್ಮ ಒತ್ತಾಯ ಮುಂದುವರೆಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

