2025-26 ನೇ ಸಾಲಿನ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನನ್ನ ಬೆಳೆ ನನ್ನ ಹಕ್ಕು ಅಡಿಯಲ್ಲಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಡಿಸೆಂಬರ್ 1 ರಿಂದ ಆರಂಭಗೊಂಡಿದೆ. ಕಳೆದ ವರ್ಷದಂತೆ ಈ ವರ್ಷವು ಸಹ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ದಾಖಲಿಸಲು ಹಿಂಗಾರು ರೈತರ ಬೆಳೆ ಸಮೀಕ್ಷೆ 2025-26 ಎಂಬ ಹೆಸರಿನ ಮೊಬೈಲ್ ಅಪ್ಲಿಕೇಶನ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಜನೆವರಿ 15, 2026 ರೊಳಗಾಗಿ ಬೆಳೆ ವಿವರಗಳನ್ನು ಆ್ಯಪ್ ಮೂಲಕ ಅಪಲೋಡ್ ಮಾಡಬೇಕು. ಮೊಬೈಲ್ ಆ್ಯಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ. ಮತ್ತು ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕಾರ್ಯವು ಜನೆವರಿ 30, 2026 ರಂದು ಪೂರ್ಣಗೊಳ್ಳಲಿದ್ದು, ಒಂದು ವೇಳೆ ಖಾಸಗಿ ನಿವಾಸಿಗಳು ನಮೂದಿಸಿದ ಬೆಳೆಯು ತಪ್ಪಾಗಿದ್ದಲ್ಲಿ ರೈತರು ಫೆಬ್ರವರಿ 15, 2026 ರೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ತಾಂತ್ರಿಕ ಮಾಹಿತಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 18004253553 ಗೆ ಕರೆಮಾಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.ಬೆಳೆ ಸಮೀಕ್ಷೆ ಮಾಹಿತಿಯು ಕನಿಷ್ಠ ಬೆಂಬಲ ಯೋಜನೆಯಡಿ (ಎಮ್‍ಎಸ್‍ಪಿ) ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಬೆಳೆ ಹಾನಿ ಪರಿಹಾರ ವಿತರಿಸಲು, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಮತ್ತು ಇತರ ಮಾನದಂಡಗಳಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ನಿಖರವಾಗಿ ತಾವೇ ಸಮೀಕ್ಷೆ ಮಾಡಲು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

