ರಾಯಚೂರು: ಟ್ರ್ಯಾಕ್ಟರ್ ಗೆ ಮರಳು ತುಂಬಿದ್ದ ಲಾರಿ ಡಿಕ್ಕಿಯಾಗಿ ರೈತ ಸಾವನ್ನಪ್ಪಿದ ಘಟನೆ ರಾಯಚೂರುನಲ್ಲಿ ನಡೆದಿದೆ.
ಇದೇ ಮಾರ್ಗವಾಗಿ ತೆರಳುತ್ತಿದ್ದ ಸಚಿವ ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತರನ್ನು ನಾಗರಾಜ್(50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಗೋರ್ಕಲ್ ಗ್ರಾಮದಿಂದ ರಾಯಚೂರಿಗೆ ಹತ್ತಿಯನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋಗುವಾಗ ರಾಯಚೂರು ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಂದಿನಿಂದ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಇದೇ ಮಾರ್ಗವಾಗಿ ತೆರಳುತ್ತಿದ್ದ ಸಚಿವ ಬೋಸರಾಜು ಗಾಯಾಳು ಮಾತನಾಡಿಸಿ ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ನಾಗರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

