ಕ್ರಿಕೆಟ್ ಕಾಶಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇತಿಹಾಸ ಮರುಕಳಿಸಿದೆ ! 2024ರ ಬಾರ್ಬಡೋಸ್ ಮೈದಾನದಲ್ಲಿ ರೋಹಿತ್ ಶರ್ಮಾ ಸೃಷ್ಟಿಸಿದ್ದ ಆ ಭಾವನಾತ್ಮಕ ಕ್ಷಣಗಳನ್ನು ಅಹಮದಾಬಾದ್‌ನ ಮಣ್ಣಿನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಪುನರಾವರ್ತಿಸಿದ್ದಾರೆ.
ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸುತ್ತಿದ್ದಂತೆಯೇ, ಇಡೀ ದೇಶ ಸಂಭ್ರಮದಲ್ಲಿ ತೇಲುತ್ತಿದ್ದರೆ, ಇತ್ತ ನಾಯಕ ಸೂರ್ಯಕುಮಾರ್ ಮೌನವಾಗಿ ಮೈದಾನದ ಮಧ್ಯಭಾಗಕ್ಕೆ ತೆರಳಿ ಪಿಚ್‌ಗೆ ಮುತ್ತಿಕ್ಕಿ, ಮಣ್ಣನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದಾರೆ.
ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಈ ಐತಿಹಾಸಿಕ ಸಾಧನೆಯ ಜೊತೆಗೆ, ಮೈದಾನಕ್ಕೆ ಸೂರ್ಯ ಸಲ್ಲಿಸಿದ ಈ ‘ಗುರು ಪ್ರಣಾಮ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ರೋಹಿತ್ ಹಾದಿಯಲ್ಲೇ ಸೂರ್ಯನ ಪಯಣ” ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಪಿಚ್’ ಗೆ ನಮನ: 2024ರಲ್ಲಿ ಬಾರ್ಬಡೋಸ್‌ನಲ್ಲಿ ಭಾರತ ಜಯಗಳಿಸಿದಾಗ ರೋಹಿತ್ ಶರ್ಮಾ ಅವರು ಪಿಚ್‌ನ ಮಣ್ಣನ್ನು ತಿಂದಿದ್ದರು. ಆದರೆ ಈಗ ಸೂರ್ಯಕುಮಾರ್ ಯಾದವ್ ಅವರು ಅಹಮದಾಬಾದ್ ಪಿಚ್‌ನ ಮಣ್ಣನ್ನು ಕೈಗೆತ್ತಿಕೊಂಡು, ಅದನ್ನು ಗೌರವದಿಂದ ತಮ್ಮ ಹಣೆಗೆ ಹಚ್ಚಿಕೊಂಡಿದ್ದಾರೆ.
ಭಾವನಾತ್ಮಕ ಕ್ಷಣ : ಗೆಲುವಿನ ಸಂಭ್ರಮದ ನಡುವೆಯೂ ಸೂರ್ಯಕುಮಾರ್ ಅವರು ಮೈದಾನದ ಮಧ್ಯಭಾಗಕ್ಕೆ ಹೋಗಿ ಮೌನವಾಗಿ ಕುಳಿತು ಪಿಚ್‌ಗೆ ಕೃತಜ್ಞತೆ ಸಲ್ಲಿಸಿದರು. ಈ ದೃಶ್ಯವು ರೋಹಿತ್ ಶರ್ಮಾ ಅವರ ಆಚರಣೆಯನ್ನು ನೆನಪಿಸಿದ್ದು, ಅಭಿಮಾನಿಗಳು “ಇದು ರೋಹಿತ್ ಅವರಿಗಿಂತಲೂ ಹೆಚ್ಚು ಭಾವುಕವಾದ ನಡೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತವು ಸತತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

