ರಾಮನಗರ: ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ಹಣದಾಸೆಗೆ ಅಕ್ರಮದಲ್ಲಿ ಭಾಗಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡಿದ್ದ ಅವಧಿ ಮೀರಿದ ಮದ್ಯವನ್ನು ಮಾರಾಟ ಮಾಡಲು ಅಧಿಕಾರಿಗಳೇ ಅವಕಾಶ ನೀಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ನಡೆದಿದೆ.
ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿಮೀರಿದ ಮದ್ಯ ಮಾರುತ್ತಿದ್ದು, ನಿಗಮದ ಸೂಪರ್ ವೈಸರ್ ಮನೆಯಲ್ಲಿ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದೆ.
ಸೂಪರ್ ವೈಸರ್ ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್ ಮದ್ಯ ಕಂಡುಬಂದಿದೆ. ವಿವಿಧೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವುಗಳನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ.
ಅವಧಿ ಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್ ಸೇರಿದಂತೆ ಹಲವು ಮದ್ಯವನ್ನು ಸಿಬ್ಬಂದಿ ಸೀಜ್ ಮಾಡಿದ್ದಾರೆ. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್ಗಳಲ್ಲಿ 20 ಬಾಕ್ಸ್ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್ ವೈಸರ್ ಸುರೇಶ್ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

