ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ವೈಟ್ ಬಾಲ್ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 13 ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಡೆಯಲಿದ್ದು, ಇಂಗ್ಲೆಂಡ್ ವೈಟ್ ಬಾಲ್ ತಂಡದ ಮುಖ್ಯ ತರಬೇತುದಾರ ಬ್ರೆಂಡನ್ ಮೆಕ್ಕಲಮ್ ತಮ್ಮ ತಂಡದ ಗಮನವನ್ನು ಸಂಪೂರ್ಣವಾಗಿ ಏಕದಿನ ಕ್ರಿಕೆಟ್ ಕಡೆಗೆ ಹರಿಸಿದ್ದಾರೆ.
ಏಕದಿನ ವಿಶ್ವಕಪ್ಗೆ ಬಲವಾದ ಸಿದ್ಧತೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಅತ್ಯುತ್ತಮ ಸಿದ್ಧತೆಯಾಗಿ ಬಳಸಿಕೊಳ್ಳಲು ಇಂಗ್ಲೆಂಡ್ ಯೋಜಿಸಿದೆ. ಈ ಕುರಿತು ಮಾತನಾಡಿದ ಮೆಕ್ಕಲಮ್, “ಆಸ್ಟ್ರೇಲಿಯಾ ಪ್ರವಾಸ ಯಾವಾಗಲೂ ಕಠಿಣ ಸವಾಲಿನಿಂದ ಕೂಡಿರುತ್ತದೆ. ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಪ್ರಬಲ ತಂಡದ ವಿರುದ್ಧ ಆಡುವುದು ನಮ್ಮ ತಂತ್ರಗಳನ್ನು ಒರೆಗೆ ಹಚ್ಚಲು ಸಹಾಯ ಮಾಡುತ್ತದೆ. ಮುಂಬರುವ ವಿಶ್ವಕಪ್ಗೆ ನಾವಿನ್ನೂ ಸುಧಾರಿಸಬೇಕಿದ್ದು, ಈ ಸರಣಿ ನಮಗೆ ಉತ್ತಮ ಅವಕಾಶ ನೀಡಲಿದೆ” ಎಂದು ತಿಳಿಸಿದ್ದಾರೆ.
ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ನಡೆದ ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್ ಕೊನೆಯ ಸ್ಥಾನಕ್ಕೆ ತಳ್ಳಿಪಟ್ಟು ಫೈನಲ್ ತಲುಪಲು ವಿಫಲವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಕೋಚ್, “ಆ ಸರಣಿಯ ಫಲಿತಾಂಶ ನಿರಾಶಾದಾಯಕವಾಗಿತ್ತು. ಆದರೆ ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಮತ್ತು ಹೊಸ ತಂತ್ರಗಳನ್ನು ರೂಪಿಸಲು ಅದು ನೆರವಾಯಿತು. ಅಲ್ಲಿ ಕಲಿತ ಪಾಠಗಳು ಮುಂಬರುವ 12 ತಿಂಗಳುಗಳಲ್ಲಿ ತಂಡಕ್ಕೆ ಹೆಚ್ಚು ಸಹಾಯ ಮಾಡಲಿವೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

