ಬೆಂಗಳೂರು: ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಟ್ ಶುಲ್ಕ ಹೆಚ್ಚಳ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಯವರು ಎಂಜಿನಿಯರಿಂಗ್ ಕೋರ್ಸ್ ಶುಲ್ಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದುವರೆಗೂ ಶುಲ್ಕ ಹೆಚ್ಚಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶುಲ್ಕ ವಿಚಾರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಈ ಹಿಂದಿನ ಸರ್ಕಾರ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಶೇಕಡ 10ರಷ್ಟು ಶುಲ್ಕ ಹೆಚ್ಚಿಸಿ ಆದೇಶಿಸಿತ್ತು. ನಮ್ಮ ಸರ್ಕಾರ ಆದೇಶ ರದ್ದುಗೊಳಿಸಿ ಆಯಾ ವರ್ಷಕ್ಕೆ ಅನುಗುಣವಾಗಿ ಶುಲ್ಕ ಪರಿಷ್ಕರಿಸಿದೆ. ಈ ವರ್ಷದ ಶುಲ್ಕ ಹೆಚ್ಚಳ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಕಾಲೇಜು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಕ್ರಮ ನಡೆಯದಂತೆ ಪಾರದರ್ಶಕವಾಗಿ ಸಿಇಟಿ ಪರೀಕ್ಷೆ ನಡೆಸಲಾಗಿದೆ. ನೀಟ್ ಪರೀಕ್ಷೆ ಫಲಿತಾಂಶ ಕಾಯುವ ಬದಲಿಗೆ ಮೊದಲೇ ಎಂಜಿನಿಯರಿಂಗ್ ಸೀಟ್ ಗಳನ್ನು ಭರ್ತಿ ಮಾಡುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

