ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಎಂದರೆ ಕೇವಲ ಅಂಕಗಳು, ಪದವಿ ಮತ್ತು ಹೆಚ್ಚಿನ ಸಂಬಳದ ಕೆಲಸ ಎಂಬಂತಾಗಿದೆ. ಆದರೆ ನಿಜವಾದ ಶಿಕ್ಷಣದ ಗುರಿ ಕೇವಲ ಜ್ಞಾನಾರ್ಜನೆಯಲ್ಲ, ಅದು ಮನುಷ್ಯನ ನಡವಳಿಕೆ ಮತ್ತು ಸಂಸ್ಕಾರದಲ್ಲಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಇಡೀ ಸಮಾಜಕ್ಕೆ ದೊಡ್ಡ ಪಾಠವನ್ನು ಕಲಿಸಿದೆ.
ಕಾಲೇಜಿನ ವಿದಾಯ ಸಮಾರಂಭದ ದಿನ ಸಾಮಾನ್ಯವಾಗಿ ಎಲ್ಲರೂ ಸೆಲ್ಫಿ ಹಾಗೂ ಮೋಜು ಮಸ್ತಿಯಲ್ಲಿ ತೊಡಗಿರೋದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿ ಒಬ್ಬ ಪದವೀಧರ ವಿದ್ಯಾರ್ಥಿ ತನ್ನ ಕಾಲೇಜಿನ ಭದ್ರತಾ ಸಿಬ್ಬಂದಿಯ ಕಾಲಿಗೆ ಬಿದ್ದು ನಮಸ್ಕರಿಸುವ ಮೂಲಕ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದಾನೆ.
ವಿದ್ಯಾರ್ಥಿಯ ಈ ನಡೆ ಪದವಿಗಿಂತ ದೊಡ್ಡದು ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಲವು ವರ್ಷಗಳ ಪರಿಶ್ರಮದ ನಂತರ ಆತ ಪದವಿ ಪಡೆದು ಉತ್ತಮ ಉದ್ಯೋಗಕ್ಕೆ ಅರ್ಹನಾಗಿರಬಹುದು. ಆದರೆ ತನ್ನ ಯಶಸ್ಸಿನ ಹಿಂದೆ ಮಳೆ ಎನ್ನದೆ ಚಳಿ ಎನ್ನದೆ ಗೇಟಿನ ಬಳಿ ನಿಂತು ಕೆಲಸ ಮಾಡುವ ಸಾಮಾನ್ಯ ಕಾರ್ಮಿಕರ ಶ್ರಮವೂ ಇದೆ ಎಂಬುದನ್ನು ಆತ ಮರೆತಿಲ್ಲ. ತಾನು ಕಲಿತ ಜ್ಞಾನ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಹೃದಯದ ಸಂಸ್ಕಾರವಾಗಿ ಹೊರಹೊಮ್ಮಿದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ.
ಈ ಭಾವನಾತ್ಮಕ ಕ್ಷಣಕ್ಕೆ ಇಡೀ ಕಾಲೇಜು ಸ್ತಬ್ದವಾಗಿತ್ತು. ಇದನ್ನು ಕಂಡ ಶಿಕ್ಷಕರು ಮತ್ತು ಸಹಪಾಠಿಗಳು ಮೌನಕ್ಕೆ ಶರಣಾದರು. ತನಗೆ ದಿನವೂ ಗೇಟ್ ತೆರೆಯುತ್ತಿದ್ದ ಹಿರಿಯ ಭದ್ರತಾ ಸಿಬ್ಬಂದಿಗೆ ಆ ವಿದ್ಯಾರ್ಥಿ ನೀಡಿದ ಈ ಗೌರವವೇ ಆ ಸಿಬ್ಬಂದಿಯ ಇಷ್ಟು ವರ್ಷಗಳ ಸೇವೆಗೆ ಸಿಕ್ಕ ಅತಿದೊಡ್ಡ ಬಹುಮಾನ ಎನ್ನಬಹುದು. ವ್ಯಕ್ತಿಯ ಅಂತಸ್ತಿನ ಬದಲಾಗಿ ಅವರ ವ್ಯಕ್ತಿತ್ವ ಮತ್ತು ಗುಣ ಮುಖ್ಯ ಎಂಬುದನ್ನು ಈ ಯುವಕ ಜಗತ್ತಿಗೆ ಸಾರಿದ್ದಾನೆ.
ತನ್ನ ಮಗನ ಈ ನಡವಳಿಕೆಯನ್ನು ಕಂಡ ಆ ತಾಯಿಯ ಹೆಮ್ಮೆ ಮಾತಿಗೆ ನಿಲುಕದ್ದು. ತನ್ನ ಮಗ ಕೇವಲ ಪದವೀಧರನಲ್ಲ, ಬದಲಾಗಿ ಅತ್ಯುತ್ತಮ ಸಂಸ್ಕಾರವಂತನಾಗಿ ಬೆಳೆದಿದ್ದಾನೆ ಎಂಬ ತೃಪ್ತಿ ಆಕೆಯ ಕಣ್ಣೀರಿನಲ್ಲಿತ್ತು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಂದ ಬಯಸುವುದು ಇಂತಹ ಮಾನವೀಯ ಗುಣಗಳನ್ನೇ ಅಲ್ಲವೇ?
ನಮ್ಮ ಸಮಾಜದಲ್ಲಿ ನಾವು ಎಷ್ಟೇ ದೊಡ್ಡ ಇಂಜಿನಿಯರ್, ವೈದ್ಯ ಅಥವಾ ಉನ್ನತ ಅಧಿಕಾರಿಯಾಗಿದ್ದರೂ ನಮ್ಮಲ್ಲಿ ಮಾನವೀಯತೆ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ರೀತಿಯಲ್ಲಿ ಗೌರವಕ್ಕೆ ಅರ್ಹನಾಗಿರುತ್ತಾನೆ. ಇಂದಿನ ಯುವ ಪೀಳಿಗೆ ಸಂಸ್ಕೃತಿ ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ಮರೆಯುತ್ತಿದ್ದಾರೆ ಎಂಬ ದೂರುಗಳ ನಡುವೆ, ಈ ಘಟನೆಯು ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ.
ಕೊನೆಯದಾಗಿ ಹೇಳುವುದಾದರೆ, ಅಕ್ಷರ ಕಲಿಯುವುದು ಮಾತ್ರ ಶಿಕ್ಷಣವಲ್ಲ, ಬದುಕನ್ನು ಕಲಿಯುವುದೇ ನಿಜವಾದ ಶಿಕ್ಷಣ. ಪದವಿ ಪತ್ರಗಳು ಕಾಲಕ್ರಮೇಣ ಹಳೆಯದಾಗಬಹುದು ಅಥವಾ ಮರೆಯಾಗಬಹುದು, ಆದರೆ ಇಂತಹ ಸಂಸ್ಕಾರ ಮತ್ತು ಮಾನವೀಯತೆ ಸಾಯುವವರೆಗೂ ನಮ್ಮ ಜೊತೆಗಿರುತ್ತದೆ. ಕಷ್ಟಪಟ್ಟು ಕೆಲಸ ಮಾಡುವವರನ್ನು ಗೌರವಿಸೋಣ ಮತ್ತು ಸಂಸ್ಕಾರಯುತ ಸಮಾಜವನ್ನು ನಿರ್ಮಿಸೋಣ.

