ಬೆಂಗಳೂರು ನಗರದ ಅಪೂರ್ಣ ಯೋಜನೆಗಳಲ್ಲಿ ಮೊದಲ ಸ್ಥಾನ ಪಡೆದಿದೆ ಈಜಿಪುರ ಫ್ಲೈ ಓವರ್. ವಿವಿಧ ಕಾರಣಕ್ಕೆ ಆಗಿನ ಬಿಬಿಎಂಪಿ ಕೈಗೊಂಡಿದ್ದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಬಿಬಿಎಂಪಿ ಜಿಬಿಎ ಆದ ಮೇಲೆ ಯೋಜನೆ ಪೂರ್ಣವಾಗಲಿದೆಯೇ? ಎಂಬುದು ಜನರ ಪ್ರಶ್ನೆ.
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಈಜಿಪುರ ಫ್ಲೈ ಓವರ್ ಕುರಿತು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸೆಂಟ್ ಜಾನ್ಸ್ ಮುಂದೆ ಸಾಗುವಾಗ ಸಂಚಾರ ದಟ್ಟಣೆಯಲ್ಲಿ ಸಿಲುಕುವ ವಾಹನ ಸವಾರರಿಗೆ ಇದು ನಿಜಕ್ಕೂ ಗುಡ್ ನ್ಯೂಸ್.
ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂಚಾರಿ ಪೊಲೀಸ್ ಅಧಿಕಾರಿಗಳು, ಸೆಂಟ್ ಜಾನ್ಸ್ ಪ್ರತಿನಿಧಿಗಳ ಜೊತೆ ಅವರು ಮಹತ್ವದ ಸಭೆಯನ್ನು ನಡೆಸಿದ್ದಾರೆ. ಈಜಿಪುರ-ಕೇಂದ್ರಿಯ ಸದನ ನಡುವೆ ಈ ಫ್ಲೈ ಓವರ್ ಸಂಪರ್ಕ ಕಲ್ಪಿಸುತ್ತದೆ.
ಈ ಕುರಿತು ಜಿಬಿಎ ಮುಖ್ಯ ಆಯುಕ್ತರ ಕಚೇರಿ ಪುಟದಲ್ಲಿ ಪೋಸ್ಟ್ ಹಾಕಲಾಗಿದ್ದು, ‘ಈಜಿಪುರದ ಪ್ರಮುಖ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ, ಸೆಂಟ್ ಜಾನ್ಸ್ ಜಾಗವನ್ನು ಮಾರ್ಕ್ ಮಾಡಿ ಕೂಡಲೇ 5 ಪೋರ್ಟಲ್ ಪಿಯರ್ ಅಳವಡಿಸುವ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು’ ಎಂದು ಮಾಹಿತಿ ನೀಡಲಾಗಿದೆ.
‘ಸೆಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯೊಂದಿಗೆ ನಡೆದ ಸಭೆಯಲ್ಲಿ ಜಾಗದ ಬಳಕೆಗೆ ಸಂಸ್ಥೆ ಸಮ್ಮತಿ ನೀಡಿದ್ದು, ಕಾಮಗಾರಿ ತಕ್ಷಣ ಆರಂಭಿಸಲು ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಲಾಗಿದೆ.
- ಪಾದಚಾರಿ ಮಾರ್ಗ ಮತ್ತು ಕಾಪೌಂಡ್ ಗೋಡೆ ಹೊಂದಿಕೊಂಡಂತೆ ಪಿಯರ್ ನಿರ್ಮಾಣ
- ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಕೆ
- ಕಾಮಗಾರಿ ಪೂರ್ಣವಾದ ಬಳಿಕ ಗೋಡೆ ನಿರ್ಮಾಣ
- ರ‍್ಯಾಂಪ್ ನಿರ್ಮಾಣಕ್ಕಾಗಿ ಟಿಡಿಆರ್ ಪ್ರಕ್ರಿಯೆ ತ್ವರಿತಗೊಳಿಸಲು ಸೂಚನೆ
ಯೋಜನೆ ಕುರಿತು ಮುಖ್ಯ ಇಂಜಿನಿಯರ್ ಡಾ. ರಾಘವೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದು, ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 645 ಕಾಸ್ಟಿಂಗ್ ಪೂರ್ಣವಾಗಿದೆ. 490 ಸೆಗ್ಮೆಂಟ್‌ಗಳ ಜೋಡಣೆ ಪೂರ್ಣವಾಗಿದೆ. 117 ಸೆಗ್ಮೆಂಟ್‌ಗಳ ಕಾಸ್ಟಿಂಗ್ ಬಾಕಿ ಇದೆ ಎಂದು ವಿವರಣೆ ನೀಡಿದ್ದಾರೆ.
2026ರ ಗಡುವು: 2.38 ಕಿ.ಮೀ.ಉದ್ದದ ಈಜಿಪುರ ಫ್ಲೈ ಓವರ್ ವಿವಿಧ ಕಾರಣಕ್ಕೆ ಭಾರೀ ತಡವಾಗಿದೆ. ಟೆಂಡರ್ ಪಡೆದವರ ಬದಲವಣೆ, ಕೋವಿಡ್ ಪರಿಸ್ಥಿತಿ ಸೇರಿದಂತೆ ಹಲವು ಕಾರಣಕ್ಕೆ ಯೋಜನೆ ವಿಳಂಬವಾಗಿದೆ. 2026ರಲ್ಲಿ ಇದನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಈಗಾಗಲೇ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಆರ್‌ಸಿಬಿಯೂ ಕಪ್ ಗೆದ್ದಾಯಿತು, ಈಜಿಪುರ ಫ್ಲೈ ಓವರ್ ಪೂರ್ಣ ಯಾವಾಗ? ಎಂಬಲ್ಲಿಂದ ಹಿಡಿದು, ಈಜಿಪುರ ಫ್ಲೈ ಓವರ್ ಬೇಗ ಮುಗಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶ ಮಾಡಬೇಕು ಎಂಬಲ್ಲಿಯ ತನಕ ಈ ಕಾಮಗಾರಿ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದೆ.
2014ರಲ್ಲಿ ಯೋಜನೆಯ ಪ್ರಸ್ತಾವನೆ ಸಿದ್ಧವಾಯಿತು. 203 ಕೋಟಿ ರೂ.ಗಳ ಯೋಜನೆಯ ಟೆಂಡರ್ 2017ರಲ್ಲಿ ಪೂರ್ಣಗೊಂಡಿತು. ಆದರೆ 2026ರ ಬಂದರೂ ಈಜಿಪುರ ಫ್ಲೈ ಓವರ್ ಪೂರ್ಣಗೊಂಡಿಲ್ಲ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕ್ಷೇತ್ರವಾದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ಎಂ. ಮಹೇಶ್ವರ್ ರಾವ್ ಸಹ ಕೆಲವು ದಿನಗಳ ಹಿಂದೆ “ನಾನು ಕೆಲವು ಮೀಮ್‌ಗಳನ್ನು ನೋಡಿದ್ದೇನೆ, ಅವುಗಳು ಬಹಳ ಸೃಜನಾತ್ಮಕವಾಗಿವೆ ಎಂದು ನಾನು ಹೇಳಲೇಬೇಕು. ತಮಾಷೆಯಾಗಿ ಹೇಳಬೇಕೆಂದರೆ ಹೇಗಿದ್ದರೂ ಆರ್‌ಸಿಬಿ ಐಪಿಎಲ್ ಗೆದ್ದಿದೆ, ಹಾಗೆಯೇ ಮುಂದಿನ ವರ್ಷ ಜುಲೈ 2026ಕ್ಕೆ ಈಜಿಪುರ ಫ್ಲೈಓವರ್ ಕೂಡ ಪೂರ್ಣಗೊಳ್ಳಲಿದೆ. ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಕೆಲಸವನ್ನು ಮುಗಿಸುತ್ತಾರೆ” ಎಂದು ಭರವಸೆನೀಡಿದ್ದಾರೆ.
ಈ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡರೆ ಸೆಂಟ್ ಜಾನ್ಸ್ ಸಿಗ್ನಲ್, ಕೋರಮಂಗಲ, ಹೊಸೂರು ರಸ್ತೆ, ಕೋರಮಂಗಲ 100 ಅಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

