ಕೋಲ್ಕತ್ತಾ: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಪಶ್ಚಿಮ ಬಂಗಾಳದ ವಿವಿಧೆಡೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತ್ತಾ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಶಾಂತನು ಸಿನ್ಹಾ ಬಿಸ್ವಾಸ್ ಮತ್ತು ಉದ್ಯಮಿ ಜಾಯ್ ಕಂದರ್ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಬ್ಯಾಲಿಗಂಜ್‌ನ ಫರ್ನ್ ರಸ್ತೆಯಲ್ಲಿರುವ ಡಿಸಿಪಿ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ಅಧಿಕಾರಿಗಳು ದಳಿ ನಡೆಸಿದ್ದು, ಕೇಂದ್ರ ಭದ್ರತಾ ಪಡೆಗಳ ನೆರವಿನೊಂದಿಗೆ ನಿವಾಸ ಪ್ರವೇಶಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ, ವಿವಿಧ ಎಲೆಕ್ಟ್ರಾನಿಕ್ ದಾಖಲೆಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಕೋಲ್ಕತ್ತಾ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್ ಅವರ ಮೇಲೆ ಈ ಹಿಂದಿನಿಂದಲೂ ಭ್ರಷ್ಟಾಚಾರ, ಅಕ್ರಮ ಹಣ ಗಳಿಕೆಯಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇವರು ಕಾಲಿಘಾಟ್ ಪೊಲೀಸ್ ಠಾಣೆಯ ಅಧಿಕಾರಿಯಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.
ಇದೇ ವೇಳೆ ಇಡಿ ಅಧಿಕಾರಿಗಳು ಉದ್ಯಮಿ ಜಾಯ್ ಎಸ್. ಕಂದರ್ ಅವರ ನಿವಾಸದ ಮೇಲೆಯೂ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ತಪಾಸಣೆಗೆ ಆಗಮಿಸಿದ ವೇಳೆ ಉದ್ಯಮಿ ಪ್ರತಿರೋಧ ಒಡ್ಡಿದರು. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಮನೆಯ ಹೊರಗೆ ಕಾಯಬೇಕಾಯಿತು.
ಈ ಹಿಂದಿನ ಶೋಧದ ವೇಳೆ ಉದ್ಯಮಿಯ ನಿವಾಸದಲ್ಲಿ ₹1.20 ಕೋಟಿ ರೂ ಹಣ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿರುವ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ತಪಾಸಣೆಯ ಬಳಿಕ ಹಣದ ಮೂಲದ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ವಿಫಲವಾದ ಉದ್ಯಮಿ ಜಾಯ್ ಕಂದರ್ ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸತತ ನಾಲ್ಕೂವರೆ ಗಂಟೆ ನಿವಾಸದಲ್ಲಿ ಶೋಧ ನಡೆದಿದೆ. ಬಳಿಕ ಉದ್ಯಮಿಯನ್ನು ಅಧಿಕಾರಿಗಳು ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

