ಬೆಂಗಳೂರು: ಕೆಪಿಎಸ್ ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಐಎ ಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದೆ.
ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಹಲವರ ನಿವಾಸದ ಮೇಲೆ ಇಡಿ ದಾಳಿ ಬೆನ್ನಲ್ಲೇ ಐಎ ಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಕೂಡ್ ಸ್ವಿಚ್ ಆಫ್ ಆಗಿತ್ತು. ಇಡಿ ದಾಳಿಗೆ ಹೆದರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರ ತಂದೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಊರಾದ ಉತ್ತರ ಪ್ರದೇಶಕೆ ಹೋಗಿದ್ದಾರೆ ಇನ್ನೆರಡು ದಿನಗಳಲ್ಲಿ ವಾಪಸ್ ಆಗುವುದಾಗಿ ಹೇಳಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದರು. ಈಗ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಇಲ್ಲದಿರುವಾಗಲೇ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜಯಮಹಲ್ ನಲ್ಲಿರುವ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ಸೆಕ್ಯೂರಿಟಿ ಗಾರ್ಡ್ ಮೂಲಕ ಮನೆಯ ಗೇಟ್ ತೆಗೆಯುವಂತೆ ಹೇಳಿ ಮನೆಯ ಗ್ರೌಂಡ್ ಫ್ಲೋರ್ ಪ್ರವೇಶಿಸಿದ್ದಾರೆ. ಒಂದು ವೇಳೆ ಸೆಕ್ಯೂರಿಟಿ ಮನೆಯ ಬಾಗಿಲು ತೆಗೆಯಲು ಒಪ್ಪದಿದ್ದರೆ ಇಡಿ ಅಧಿಕಾರಿಗಳೇ ಜ್ಞಾನೇಂದ್ರ ಕುಮಾರ್ ಮನೆ ಬೀಗ ಒಡೆದು ಒಳನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಪಿಎಸ್ ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮ ಸಂಬಂಧ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಂದು ಪಶುವೈದ್ಯಾಧಿಕಾರಿಗಳ ನೇಮಕಾತಿ ವೇಳೆ ಜ್ಞಾನೇಂದ್ರ ಕುಮಾರ್ ಪರೀಕ್ಷಾ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆದಿದೆ.

