ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಮತ್ತೆ ಇಡಿ ಸಂಕಷ್ಟ ತಂದಿದೆ. ಅವರನ್ನು ಬಂಧಿಸಿ, ಆಸ್ತಿ ಜಪ್ತಿ ಮಾಡಿದ್ದ ಇಡಿ ಈಗ ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದೆ.
ಡಿಸೆಂಬರ್ 30ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ, ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.
ಈ ಜಾಮೀನು ರದ್ದುಗೊಳಿಸುವಂತೆ ಕೋರಿ ಇಡಿ ಗುರುವಾರ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಇಡಿ ಕೆ.ಸಿ.ವೀರೇಂದ್ರ ಪಪ್ಪಿ ಬಂಧಿಸಿತ್ತು.
ಇಡಿ ಬೆಂಗಳೂರು ವಲಯದ ಸಹಾಯಕ ನಿರ್ದೇಶಕ ಅಜಯ್ ವೈದ್ಯ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು.
ಇಡಿ ಪರ ವಕೀಲರು ಅರ್ಜಿಯ ವಿಚಾರಣೆ ವೇಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವೀರೇಂದ್ರ ಪಪ್ಪಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ವಕೀಲರ ವಾದ ಆಲಿಸಿದ ಕೋರ್ಟ್ ವೀರೇಂದ್ರ ಪಪ್ಪಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು.
ಪಿಎಂಎಲ್ಎ ಕಾಯ್ದೆ-2022ರ ಕಲಂ 3 ಮತ್ತು 4ರ ಅಡಿಯಲ್ಲಿ ವೀರೇಂದ್ರ ಪಪ್ಪಿ ವಿರುದ್ಧ ಪ್ರಕರಣ ದಾಖಲಾಗಿದೆ. 2025ರ ಆಗಸ್ಟ್ನಲ್ಲಿ ಜಾರಿ ನಿರ್ದೇಶನಾಲಯ ಸಿಕ್ಕಿಂನಲ್ಲಿ ಅವರನ್ನು ಬಂಧಿಸಿತ್ತು. ಇಡಿ ವಿಚಾರಣೆ ಬಳಿಕ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಜನಪ್ರತಿನಿಧಿಗಳ ಕೋರ್ಟ್ ಡಿಸೆಂಬರ್ 30, 2025ರಂದು ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಈಗ ಈ ಜಾಮೀನು ರದ್ದುಗೊಳಿಸುವಂತೆ ಕೋರಿ ಇಡಿ ಹೈಕೋರ್ಟ್ ಮೊರೆ ಹೋಗಿದ್ದು, ಶಾಸಕರಿಗೆ ಸಂಕಷ್ಟ ಎದುರಾಗಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಿರುದ್ಧ ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದ ದಾಖಲಾಗಿದೆ. ಈ ಕುರಿತು ತನಿಖೆ ಕೈಗೊಂಡಿದ್ದ ಇಡಿ ಅವರಿಗೆ ಸೇರಿದ್ದ 177.3 ಕೋಟಿ ಆಸ್ತಿಯನ್ನು ಕೆಲವು ದಿನಗಳ ಹಿಂದೆ ಜಪ್ತಿ ಮಾಡಿತ್ತು.
ಇಡಿ ಅಧಿಕಾರಿಗಳು ಚಿತ್ರದುರ್ಗ, ಗೋವಾ, ಬೆಂಗಳೂರು ಸೇರಿದಂತೆ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ಹಲವು ಪ್ರದೇಶಗಳಲ್ಲಿ ದಾಳಿ ಮಾಡಿದ್ದರು. ದಾಳಿಯ ಸಮಯದಲ್ಲಿ ಅವರ ಮನೆಯಲ್ಲಿ ವಿದೇಶಿ ಕರೆನ್ಸಿ ಸೇರಿದಂತೆ 12 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿತ್ತು.

