ಬೆಂಗಳೂರು- ಕರ್ನಾಟಕದ ವಿಶ್ವವಿಖ್ಯಾತ ಕರಕುಶಲ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ವಿಶಾಲ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (KSHDCL) ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ಗೆ ಹೊಸ ಡಿಜಿಟಲ್ ರೂಪ ನೀಡುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಇ-ಕಾಮರ್ಸ್ ಪೋರ್ಟಲ್ ಅನ್ನು ಮುಂಬರುವ ಗಣಪತಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ.
ಹೊಸ ಡಿಜಿಟಲ್ ವೇದಿಕೆಯ ಮೂಲಕ ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ನ ಆನ್‌ಲೈನ್ ಮಾರಾಟವನ್ನು ಪ್ರಸ್ತುತ ವಾರ್ಷಿಕ ₹70 ಲಕ್ಷದಿಂದ ಮುಂದಿನ ಮೂರು ವರ್ಷಗಳಲ್ಲಿ ₹5 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಾಲಿ ಇ-ಕಾಮರ್ಸ್ ಪೋರ್ಟಲ್ ಅನ್ನು 2012ರಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹೊಸ ಪೋರ್ಟಲ್ ಕೇವಲ ವಿನ್ಯಾಸ ಬದಲಾವಣೆಯಾಗಿರದೆ, ಗ್ರಾಹಕಸ್ನೇಹಿ ಹಾಗೂ ವಿಸ್ತೃತ ಡಿಜಿಟಲ್ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ.
ಗ್ರಾಹಕಸ್ನಿಷ್ಠ ಪೋರ್ಟಲ್ ಕಾರ್ಯಪ್ರಣಾಳಿ
ಗ್ರಾಹಕರ ಆಯ್ಕೆಗೆ ತಕ್ಕಂತೆ ‘Customize Product’
ಹೊಸ ಪೋರ್ಟಲ್‌ನ ಪ್ರಮುಖ ಆಕರ್ಷಣೆ ‘Customize Product’ ಸೌಲಭ್ಯ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಗಾತ್ರ, ವಿನ್ಯಾಸ, ಬಣ್ಣ, ವಸ್ತು, ಕೆತ್ತನೆ, ವೈಯಕ್ತೀಕರಣ, ಪ್ರಮಾಣ ಮತ್ತು ಪ್ಯಾಕೇಜಿಂಗ್ ಕುರಿತ ಬೇಡಿಕೆಗಳನ್ನು ಸಲ್ಲಿಸಬಹುದು. ಕಾರ್ಪೊರೇಟ್ ಗಿಫ್ಟಿಂಗ್ ಹಾಗೂ ವಿಶೇಷ ಕಾರ್ಯಕ್ರಮಗಳ ಅಗತ್ಯಗಳಿಗೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ವೈವಿಧ್ಯಮಯ ಕರಕುಶಲ ಉತ್ಪನ್ನಗಳ ಪ್ರಾಚುರ್ಯ
ಹೊಸ ಪೋರ್ಟಲ್‌ನಲ್ಲಿ ಶ್ರೀಗಂಧ, ರೋಸ್‌ವುಡ್, ಬಿದರಿ ಕಲೆ, ಚನ್ನಪಟ್ಟಣ ಲ್ಯಾಕರ್‌ವೇರ್, ಕಿನ್ನಾಳ ಆಟಿಕೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಲೋಹದ ಕರಕುಶಲ ಹಾಗೂ ಕೈಮಗ್ಗ-ಜವಳಿ ಉತ್ಪನ್ನಗಳು ಸೇರಿದಂತೆ ಕರ್ನಾಟಕದ ವೈವಿಧ್ಯಮಯ ಕರಕುಶಲ ಉತ್ಪನ್ನಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ.
ಹೊಸ ಪೋರ್ಟಲ್ ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಎಂಪೋರಿಯಂನ ಡಿಜಿಟಲ್ ವಿಸ್ತರಣೆಯಾಗಿ, ಕರ್ನಾಟಕದ ಕುಶಲಕರ್ಮಿಗಳು ಮತ್ತು ಅವರ ಕಲೆಯನ್ನು ಆಧುನಿಕ ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ವೇದಿಕೆಯಾಗಲಿದೆ.

