ಅಕ್ರಾ(ಘಾನಾ): 2025ರ ಡಿಸೆಂಬರ್ 25 ರಂದು ಜಗತ್ತು ಕೊನೆಯಾಗಲಿದೆ ಎಂದು ಸ್ಥಳೀಯರಲ್ಲಿ ಭೀತಿ ಮೂಡಿಸಿದ ಜಾಗತಿಕ ಪ್ರವಾಹದ ಮುನ್ಸೂಚನೆ ನೀಡಿದ್ದಕ್ಕಾಗಿ ಸ್ವಯಂ ಘೋಷಿತ ಘಾನಾದ ಪ್ರವಾದಿ ಎಬೋ ನೋಹ್ ಅವರನ್ನು ಘಾನಾ ಪೊಲೀಸರು ಬಂಧಿಸಿದ್ದಾರೆ.
ನೋಹ್ ಅವರನ್ನು ಘಾನಾ ಪೊಲೀಸ್ ಸೇವೆಯ ವಿಶೇಷ ಸೈಬರ್ ಪರಿಶೀಲನಾ ತಂಡ ಬುಧವಾರ(ಸ್ಥಳೀಯ ಸಮಯ) ಬಂಧಿಸಿದೆ. ಕೈಕೋಳದೊಂದಿಗೆ ಪೊಲೀಸ್ ಕಸ್ಟಡಿಯಲ್ಲಿರುವ ಸ್ವಯಂ ಘೋಷಿತ ಪ್ರವಾದಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿತ್ತು. ಆಧುನಿಕ ನೋಹ್ ತನ್ನನ್ನು ದೇವರು ಕಳುಹಿಸಿದ ಪ್ರವಾದಿ ಎಂದು ಹೇಳಿಕೊಂಡಿದ್ದ. ಡಿಸೆಂಬರ್ 25 ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ್ದ.
ಡಿಸೆಂಬರ್ 25, 2025 ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ದೇವರು ತನಗೆ ಎಚ್ಚರಿಸಿದ್ದಾನೆ. ಭಾರೀ ಮಳೆ ಮತ್ತು ಪ್ರವಾಹದಿಂದ ವಿನಾಶ ಉಂಟಾಗುತ್ತದೆ. ಜನರನ್ನು ರಕ್ಷಿಸಲು ದೇವರು ದೋಣಿಗಳನ್ನು ನಿರ್ಮಿಸಲು ಸೂಚಿಸಿದ್ದಾನೆ ನಾನು ಅಂತಹ 10 ದೋಣಿಗಳನ್ನು ನಿರ್ಮಿಸಿದ್ದೇನೆ ಎಂದು ಹೇಳಿಕೊಂಡಿದ್ದ.
ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 32,000 ಅನುಯಾಯಿಗಳನ್ನು ಹೊಂದಿರುವ ಎಬೋ ನೋಹನ್ ತನ್ನ ಹೆಸರನ್ನು ‘ಎಬೋ ಜೀಸಸ್’ ಎಂದು ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ಆಗಸ್ಟ್ನಲ್ಲಿ “ವಾಟ್ ವಿಲ್ ಹ್ಯಾಪನ್ ಅಂಡ್ ಹೌ ಇಟ್ ವಿಲ್ ಹ್ಯಾಪನ್” ಎಂಬ ಶೀರ್ಷಿಕೆಯ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದ, ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದ.
ಮತ್ತೊಂದು ವೀಡಿಯೊದಲ್ಲಿ, ಮೂರು ವಾರಗಳ ಉಪವಾಸದ ಮೂಲಕ ಅವನು ದೇವರಿಗೆ ವಿನಾಶವನ್ನು “ಮುಂದೂಡಲು” ಒತ್ತಾಯಿಸಿದ್ದಾಗಿ ಹೇಳಿಕೊಂಡಿದ್ದ. ನನ್ನ ಪ್ರಯತ್ನದಿಂದ ವಿನಾಶ ವಿಳಂಬವಾಗಿದೆ ಎಂದು ಹೇಳಿಕೊಂಡು ಅವನು ಜನರನ್ನು ಪಾರ್ಟಿಗೆ ಆಹ್ವಾನಿಸಿದ್ದ. ಈ ಎಲ್ಲಾ ಬೆಳವಣಿಗೆ ಬಳಿಕ ಆತನನ್ನು ಬಂಧಿಸಲಾಗಿದೆ.

