ಇಂದಿನ ಧಾವಂತದ ಬದುಕಿನಲ್ಲಿ ಅಡುಗೆ ಮನೆ ಕೆಲಸಗಳನ್ನು ಸುಲಭಗೊಳಿಸಲು ಹತ್ತಾರು ಗ್ಯಾಜೆಟ್ಗಳು ಬಂದಿವೆ. ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್, ಪಾತ್ರೆ ತೊಳೆಯಲು ಡಿಶ್ ವಾಷರ್ ಹೀಗೆ ಯಂತ್ರಗಳು ಸಮಯ ಉಳಿಸುತ್ತಿವೆ. ಆದರೆ, ಅಡುಗೆ ಮನೆಯಲ್ಲಿ ಎಷ್ಟೇ ಗ್ಯಾಜೆಟ್ ಇದ್ದರೂ ಬೆಳ್ಳುಳ್ಳಿ ಸುಲಿಯುವುದು ಮಾತ್ರ ಬಹುತೇಕರಿಗೆ ಇಂದಿಗೂ ದೊಡ್ಡ ತಲೆನೋವಿನ ಕೆಲಸ
ಬೆಳ್ಳುಳ್ಳಿ ಸಿಪ್ಪೆ ತೆಗೆಯುವಾಗ ಉಗುರುಗಳ ಸಂಧಿಯಲ್ಲಿ ನೋವು, ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದೇ ಕಾರಣಕ್ಕೆ ಅನೇಕರು ಬೆಳ್ಳುಳ್ಳಿ ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಇನ್ಮುಂದೆ ಚಿಂತೆ ಬಿಡಿ ವೃತ್ತಿಪರ ಶೆಫ್ಗಳು ಬಳಸುವ ಮತ್ತು ನಿಮ್ಮ ಸಮಯ ಉಳಿಸುವ 5 ಅದ್ಭುತ ಕಿಚನ್ ಟ್ರಿಕ್ಸ್ (Kitchen Tricks) ಇಲ್ಲಿವೆ.
1.ಬಿಸಿ ನೀರಿನ ಮ್ಯಾಜಿಕ್ (Hot Water Method)
ಇದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ವಿಧಾನ. ಬೆಳ್ಳುಳ್ಳಿ ಎಸಳುಗಳನ್ನು ಪ್ರತ್ಯೇಕಿಸಿ ಒಂದು ಬಟ್ಟಲಿನಲ್ಲಿ ಹಾಕಿ, ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಸುರಿಯಿರಿ. 10 ರಿಂದ 15 ನಿಮಿಷ ನೆನೆಯಲು ಬಿಟ್ಟರೆ ಸಿಪ್ಪೆ ಮೃದುವಾಗುತ್ತದೆ. ಬಳಿಕ ಕೈಯಿಂದ ಲಘುವಾಗಿ ಒತ್ತಿದರೆ ಸಿಪ್ಪೆ ಸಲೀಸಾಗಿ ಬೇರ್ಪಡುತ್ತದೆ.
2.ಗಾಜಿನ ಜಾರ್ ಅಥವಾ ಡಬ್ಬಿಯ ಟ್ರಿಕ್ (Shake it Up!)
ಕೈಗೆ ಬೆಳ್ಳುಳ್ಳಿ ವಾಸನೆ ಹತ್ತಬಾರದು ಎನ್ನುವವರಿಗೆ ಇದು ಬೆಸ್ಟ್ ಐಡಿಯಾ. ಬೆಳ್ಳುಳ್ಳಿ ಎಸಳುಗಳನ್ನು ಒಂದು ಖಾಲಿ ಗಾಜಿನ ಜಾರ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಮುಚ್ಚಳ ಮುಚ್ಚಿ. ನಂತರ ಒಂದೆರಡು ನಿಮಿಷಗಳ ಕಾಲ ಜೋರಾಗಿ ಕುಲುಕಿ (Shake). ಡಬ್ಬಿಯ ಗೋಡೆಗೆ ತಾಗಿ ಉಂಟಾಗುವ ಘರ್ಷಣೆಯಿಂದ ಸಿಪ್ಪೆಗಳು ತಾವಾಗಿಯೇ ಕಳಚಿಕೊಳ್ಳುತ್ತವೆ.
3.ಮೈಕ್ರೋವೇವ್ ಹ್ಯಾಕ್ (Quick Microwave Hack)
ನಿಮ್ಮಲ್ಲಿ ಮೈಕ್ರೋವೇವ್ ಇದ್ದರೆ ಕೆಲಸ ಇನ್ನೂ ಸುಲಭ. ಬೆಳ್ಳುಳ್ಳಿ ಗಡ್ಡೆ ಅಥವಾ ಎಸಳುಗಳನ್ನು ಕೇವಲ 20 ಸೆಕೆಂಡ್ಗಳ ಕಾಲ ಮೈಕ್ರೋವೇವ್ನಲ್ಲಿ ಇರಿಸಿ. ಬಿಸಿಯಾದಾಗ ಸಿಪ್ಪೆ ಒಣಗಿ ಕಾಗದದಂತೆ ಆಗುತ್ತದೆ, ಆಗ ಸುಲಿಯುವುದು ತುಂಬಾ ಸುಲಭ. ನೆನಪಿಡಿ 20 ಸೆಕೆಂಡ್ಗಿಂತ ಹೆಚ್ಚು ಕಾಲ ಇಡಬೇಡಿ, ಇಲ್ಲದಿದ್ದರೆ ಬೆಳ್ಳುಳ್ಳಿ ಬೆಂದು ಹೋಗಬಹುದು.
4.ಲಟ್ಟಣಿಗೆ ಅಥವಾ ಭಾರವಾದ ಪಾತ್ರೆ
ತಕ್ಷಣಕ್ಕೆ ಒಂದೆರಡು ಎಸಳು ಬೆಳ್ಳುಳ್ಳಿ ಬೇಕಾದಾಗ ಈ ವಿಧಾನ ಬಳಸಿ. ಬೆಳ್ಳುಳ್ಳಿಯನ್ನು ಸಮತಟ್ಟಾದ ಜಾಗದಲ್ಲಿಟ್ಟು ಅದರ ಮೇಲೆ ಲಟ್ಟಣಿಗೆಯಿಂದ ಅಥವಾ ಭಾರವಾದ ಪಾತ್ರೆಯಿಂದ ಲಘುವಾಗಿ ಒತ್ತಿ. ಬೆಳ್ಳುಳ್ಳಿ ಜಜ್ಜಿದಂತಾದಾಗ ಸಿಪ್ಪೆ ಸಡಿಲಗೊಂಡು ತಕ್ಷಣ ಕೈಗೆ ಬರುತ್ತದೆ.
5.ಶೆಫ್ಗಳ ಸ್ಟೈಲ್: ಚಾಕುವಿನ ಬಳಕೆ
ದೊಡ್ಡ ಹೋಟೆಲ್ಗಳಲ್ಲಿ ಶೆಫ್ಗಳು ಈ ವಿಧಾನ ಬಳಸುತ್ತಾರೆ. ಬೆಳ್ಳುಳ್ಳಿ ಎಸಳಿನ ಮೇಲೆ ಚಾಕುವಿನ ಅಗಲವಾದ ಪಾರ್ಶ್ವವನ್ನು ಇಟ್ಟು ಹಸ್ತದಿಂದ ಒಂದು ಪೆಟ್ಟು ನೀಡಿ. ಇದರಿಂದ ಬೆಳ್ಳುಳ್ಳಿ ಚಪ್ಪಟೆಯಾಗಿ ಸಿಪ್ಪೆ ಕೂಡಲೇ ಬಿಟ್ಟುಕೊಳ್ಳುತ್ತದೆ. ಈ ರೀತಿ ಜಜ್ಜಿದ ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವುದರಿಂದ ರುಚಿ ಮತ್ತು ಪರಿಮಳ ಹೆಚ್ಚುತ್ತದೆ.
ಸಮಯ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್:
ಒಂದೇ ಬಾರಿಗೆ 1-2 ಕೆಜಿ ಬೆಳ್ಳುಳ್ಳಿಯನ್ನು ಮೇಲಿನ ಯಾವುದಾದರೂ ವಿಧಾನ ಬಳಸಿ ಸುಲಿದುಕೊಳ್ಳಿ. ನಂತರ ಅದನ್ನು ಗಾಳಿಯಾಡದ (Air-tight) ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಇಡಿ. ಇದು ಮುಂದಿನ ಒಂದು ವಾರದವರೆಗೆ ತಾಜಾವಾಗಿರುತ್ತದೆ ಮತ್ತು ಅಡುಗೆ ಮಾಡುವಾಗ ನಿಮ್ಮ ಸಮಯವನ್ನು ಉಳಿಸುತ್ತದೆ.

