HomeLatest Newsಆಟೋ ಓಡಿಸದೆಯೇ ಲಕ್ಷ ಲಕ್ಷ ಗಳಿಕೆ ; ಮುಂಬೈ ಚಾಲಕನ ಅಪರೂಪದ 'ಬಿಸಿನೆಸ್ ಐಡಿಯಾ '!

ಆಟೋ ಓಡಿಸದೆಯೇ ಲಕ್ಷ ಲಕ್ಷ ಗಳಿಕೆ ; ಮುಂಬೈ ಚಾಲಕನ ಅಪರೂಪದ ‘ಬಿಸಿನೆಸ್ ಐಡಿಯಾ ‘!

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಓರ್ವ ಆಟೋ ಚಾಲಕ ತನ್ನ ಆಟೋ ಓಡಿಸದೆಯೇ ತಿಂಗಳಿಗೆ ಬರೋಬ್ಬರಿ ₹5 ರಿಂದ 8 ಲಕ್ಷ ರೂ.ಗಳಷ್ಟು ಆದಾಯ ಗಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಐಟಿ ನಿರ್ದೇಶಕರು ಅಥವಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೂ ಸವಾಲಾಗಬಹುದಾದ ಈ ಆದಾಯ, ಯಾವುದೇ ಎಂ.ಬಿ.ಎ ಪದವಿ, ಸ್ಟಾರ್ಟ್‌ಅಪ್ ಅಥವಾ ಅತ್ಯಾಧುನಿಕ ತಂತ್ರಜ್ಞಾನವಿಲ್ಲದೆ, ಕೇವಲ ಸ್ವಂತ ಪರಿಶ್ರಮದಿಂದ ಗಳಿಸಿದ್ದು ಎಂಬುದು ವಿಶೇಷ.

ಲೆನ್ಸ್‌ಕಾರ್ಟ್‌ನ ಪ್ರಾಡಕ್ಟ್ ಲೀಡರ್ ಹಾಗೂ ಅನುಭವಿ ಉದ್ಯಮಿ ರಾಹುಲ್ ರೂಪಿಣಿ ಅವರು ಈ ಕುರಿತು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ಈ ವ್ಯವಹಾರಿಕ ಬುದ್ಧಿವಂತಿಕೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಮೆರಿಕನ್ ದೂತಾವಾಸದ (US Consulate) ಹೊರಗೆ ತನ್ನ ಆಟೋ ನಿಲ್ಲಿಸುವ ಈ ಚಾಲಕ, ಅಲ್ಲಿಗೆ ಬರುವ ಸಂದರ್ಶಕರ ಬ್ಯಾಗ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಸೇವೆಯನ್ನು ಒದಗಿಸುತ್ತಾನೆ. ರೂಪಿಣಿ ತಮ್ಮ ವೀಸಾ ಸಂದರ್ಶನಕ್ಕಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. “ಸೆಕ್ಯುರಿಟಿ ಸಿಬ್ಬಂದಿ ಬ್ಯಾಗ್ ಒಳಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದರು. ಲಾಕರ್‌ಗಳಾಗಲೀ, ಪರ್ಯಾಯ ವ್ಯವಸ್ಥೆಯಾಗಲೀ ಇರಲಿಲ್ಲ. ‘ನೀವೇ ಏನಾದರೂ ಮಾಡಿಕೊಳ್ಳಿ’ ಎಂದರು” ಎಂದು ರೂಪಿಣಿ ವಿವರಿಸಿದ್ದಾರೆ. ಆಗ ಗೊಂದಲದಲ್ಲಿದ್ದ ಅವರಿಗೆ ಆಟೋ ಚಾಲಕನೊಬ್ಬ, “ಸರ್, ಬ್ಯಾಗ್ ಕೊಡಿ. ಸೇಫ್ ಆಗಿ ಇಡ್ತೀನಿ, ಇದು ನನಗೆ ಪ್ರತಿದಿನದ ಕೆಲಸ. ₹1,000 ಶುಲ್ಕ” ಎಂದು ಹೇಳಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಆಟೋ ಚಾಲಕ ಪ್ರತಿದಿನ ಕಾನ್ಸುಲೇಟ್ ಹೊರಗೆ ತನ್ನ ಆಟೋ ನಿಲ್ಲಿಸಿ, ಪ್ರತಿ ಗ್ರಾಹಕರಿಂದ ₹1,000 ಶುಲ್ಕ ಪಡೆದು ಬ್ಯಾಗ್ ಸೇವೆ ನೀಡುತ್ತಾನೆ. ಪ್ರತಿದಿನ 20 ರಿಂದ 30 ಗ್ರಾಹಕರು ಇರುವುದರಿಂದ, ಚಾಲಕ ದಿನಕ್ಕೆ ₹20,000 ರಿಂದ ₹30,000 ಗಳಿಸುತ್ತಾನೆ. ಇದು ತಿಂಗಳಿಗೆ ₹5 ರಿಂದ 8 ಲಕ್ಷದಷ್ಟು ಆದಾಯಕ್ಕೆ ಸಮನಾಗಿದೆ!

“ಆಟೋದಲ್ಲಿ 30 ಬ್ಯಾಗ್‌ಗಳನ್ನು ಕಾನೂನುಬದ್ಧವಾಗಿ ಇಡಲು ಸಾಧ್ಯವಾಗದ ಕಾರಣ, ಇವರು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಆ ಪೊಲೀಸ್ ಅಧಿಕಾರಿಗೆ ಹತ್ತಿರದಲ್ಲೇ ಲಾಕರ್ ಸ್ಥಳವಿದೆ. ಬ್ಯಾಗ್‌ಗಳನ್ನು ಅಲ್ಲಿ ಸುರಕ್ಷಿತವಾಗಿ ಮತ್ತು ಕಾನೂನುಬದ್ಧವಾಗಿ ಇಡಲಾಗುತ್ತದೆ. ಆಟೋ ಕೇವಲ ಗ್ರಾಹಕರನ್ನು ಆಕರ್ಷಿಸುವ ಮಾಧ್ಯಮ ಅಷ್ಟೇ” ಎಂದು ರೂಪಿಣಿ ವಿವರಿಸಿದ್ದಾರೆ.

ಇದೊಂದು “ಅತ್ಯಂತ ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಕಂಡುಕೊಂಡ ಮಾಸ್ಟರ್‌ಕ್ಲಾಸ್” ಎಂದು ರೂಪಿಣಿ ಬಣ್ಣಿಸಿದ್ದಾರೆ. ತಂತ್ರಜ್ಞಾನವಿಲ್ಲದೆ ವಿಶ್ವಾಸ ಗಳಿಸುವುದು, ಕಾನೂನುಬದ್ಧ ಮಾರ್ಗ ಕಂಡುಕೊಳ್ಳುವುದು ಮತ್ತು ತಕ್ಷಣದ ನೆಮ್ಮದಿಗಾಗಿ ಉತ್ತಮ ಶುಲ್ಕ ವಿಧಿಸುವ ಆ ಚಾಲಕನ ಸಾಮರ್ಥ್ಯವನ್ನು ರೂಪಿಣಿ ಶ್ಲಾಘಿಸಿದ್ದಾರೆ. “ಯಾವುದೇ MBA ಇಲ್ಲ. ಯಾವುದೇ ಸ್ಟಾರ್ಟ್‌ಅಪ್ ಪರಿಭಾಷೆ ಇಲ್ಲ. ಕೇವಲ ಪರಿಶುದ್ಧ ಪರಿಶ್ರಮ” ಎಂದು ಅವರು ಹೇಳಿದ್ದಾರೆ.

“ಇದು ವ್ಯಾಪಾರ ಪುಸ್ತಕಗಳಲ್ಲಿ ಓದಲು ಸಿಗದಂತಹ ಆದರೆ ನೀವೇ ಮೊದಲು ಯೋಚಿಸಬೇಕೆಂದು ಬಯಸುವ ಉದ್ಯಮಶೀಲತೆ. ನಿಜವಾದ ಉದ್ಯಮಶೀಲತೆಗೆ ಯಾವಾಗಲೂ ಪಿಚ್ ಡೆಕ್ ಅಗತ್ಯವಿಲ್ಲ. ಕೆಲವೊಮ್ಮೆ ಅದಕ್ಕೆ ಬೇಕಾಗಿರುವುದು ಒಂದು ಪಾರ್ಕಿಂಗ್ ಸ್ಥಳವಷ್ಟೇ” ಎಂದು ರಾಹುಲ್ ರೂಪಿಣಿ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular