ಕೋಲಾರ: ಕೋಲಾರದಲ್ಲಿ ಸರ್ವೆ ಇಲಾಖೆ ಅಧಿಕಾರಿ ಸುರೇಶ್ ಬಾಬುಗೆ ಸೇರಿದ ಒಟ್ಟು ಆರು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಕೋಲಾರ ನಗರದ ಮನೆ, ಮಾಲೂರು, ಪಟ್ಟಣದ ಮನೆ, ನಿಡಘಟ್ಟ ಗ್ರಾಮದ ಮನೆ, ಕಚೇರಿಗಳು ಸೇರಿ ಒಟ್ಟು ಆರು ಕಡೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಅಕ್ರಮವಾಗಿ ಸರ್ಕಾರಿ ದಾಖಲೆ ತಿದ್ದಿ ಸರ್ಕಾರಿ ಭೂಮಿ ಕಬಳಿಕೆ, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಸುರೇಶ್ ಬಾಬು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಮೂರು ತಿಂಗಳ ಹಿಂದೆಯೇ ಸುರೇಶ್ ಬಾಬು ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಇದೀಗ ಮತ್ತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.