ತಿರುವನಂತಪುರಂ: ಜೀತು ಜೋಸೆಫ್ ನಿರ್ದೇಶನದ, ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ದೃಶ್ಯಂ-3 ಸಿನಿಮಾಗೆ ಕಾನೂನು ಸಂಕಷ್ಟ ಶುರುವಾಗಿದೆ. ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡುತ್ತಿರುವ ದೃಶ್ಯಂ-3 ಸಿನಿಮಾದಲ್ಲಿ ಜಾರ್ಜ್‌ಕುಟ್ಟಿ (ಮೋಹನ್‌ಲಾಲ್) ಚಲಾಯಿಸುವ ಕಾರಿನ ನಂಬರ್ ವಿವಾದಕ್ಕೆ ಕಾರಣವಗಿದೆ.
ಕಾರಿನ ನಂಬರ್ ಪ್ಲೇಟನ್ನು ತನ್ನ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಇಡುಕ್ಕಿ ಮೂಲದ ರೈತರೊಬ್ಬರು ಪೊಲೀಸ್ ಠಾನೆಯಲ್ಲಿ ದೂರು ನೀಡಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ಕುಂಚಿತ್ತಣ್ಣಿ ನಿವಾಸಿ, ರೈತ ಆರ್.ಡಿ. ರಾಜೀವ್ ಎಂಬುವರು ಮುನ್ನಾರ್ ಪೊಲೀಸರಿಗೆ ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಮತ್ತು ನಿರ್ದೇಶಕ ಜೀತು ಜೋಸೆಫ್ ವಿರುದ್ಧ ದೂರು ನೀಡಿದ್ದಾರೆ.
ದೃಶ್ಯಂ-3 ಚಿತ್ರದಲ್ಲಿ ಮೋಹನ್‌ಲಾಲ್ ಅವರ ಪಾತ್ರ ಚಲಾಯಿಸುವ ವಾಹನಕ್ಕೆ ಬಳಸಿರುವ ‘KL 69 D 2772’ ನೋಂದಣಿ ಸಂಖ್ಯೆ ತಮಗೆ ಸೇರಿದ್ದಾಗಿದೆ ಎಂದು ರೈತ ರಾಜೀವ್ ಆರೋಪಿಸಿದ್ದಾರೆ.
ರಾಜೀವ್ ಅವರ ಸ್ನೇಹಿತರು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾಗ ಈ ನಂಬರ್ ಪ್ಲೇಟ್ ಗಮನಿಸಿ ಅವರಿಗೆ ತಿಳಿಸಿದ್ದಾರೆ. ಬಳಿಕ ಸ್ವತಃ ರಾಜೀವ್ ಅವರೇ ಚಿತ್ರವನ್ನು ವೀಕ್ಷಿಸಿ ಈ ವಿಷಯವನ್ನು ಖಚಿತಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ರಾಜೀವ್ ಅವರದ್ದು, ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು. ಚಿತ್ರದಲ್ಲಿ ಇದೇ ನಂಬರ್ ಅನ್ನು ಮತ್ತೊಂದು ಮಾಡೆಲ್‌ನ ವಾಹನಕ್ಕೆ ಬಳಸಲಾಗಿದೆ.
ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.ಇತ್ತ ರಾಜೀವ್ ಅವರಿಗೆ ಮಾನಸಿಕ ಕಿರಿಕಿರಿ ಶುರುವಾಗಿದೆ. ಸಾರ್ವಜನಿಕರು ಮತ್ತು ಯುವಕರು ರಸ್ತೆಯಲ್ಲಿ ರಾಜೀವ್ ಅವರ ಕಾರನ್ನು ನೋಡಿದಾಗ ‘ದೃಶ್ಯಂ ವಾಹನ’ ಎಂದು ಕರೆಯುತ್ತಿದ್ದು, ಅವರನ್ನು ‘ದೃಶ್ಯಂ ರಾಜೀವ್’ ಎಂದು ಚುಡಾಯಿಸುತ್ತಿದ್ದಾರಂತೆ. ಸಿನಿಮಾದ ಕಾಲ್ಪನಿಕ ಕ್ರಿಮಿನಲ್ ಕಥೆಯೊಂದಿಗೆ ತನ್ನ ವಾಹನದ ನಂಬರ್ ಲಿಂಕ್ ಆಗಿರುವುದರಿಂದ ಭವಿಷ್ಯದಲ್ಲಿ ತನಗೆ ಕಾನೂನು ತೊಡಕುಗಳು ಎದುರಾಗಬಹುದು ಎಂದು ರಾಜೀವ್ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ದೂರಿನೊಂದಿಗೆ ವಾಹನದ ಅಸಲಿ ಆರ್‌ಸಿ (RC) ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಿರುವ ರಾಜೀವ್, ಚಿತ್ರತಂಡ ತನಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ವಿವಾದಿತ ನಂಬರ್ ಪ್ಲೇಟ್ ಇರುವ ದೃಶ್ಯಗಳನ್ನು ತಕ್ಷಣವೇ ಚಿತ್ರದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲಿಯವರೆಗೆ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮುನ್ನಾರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

