ಬೆಂಗಳೂರು: ಸೀ ಬರ್ಡ್ ಬಸ್‌ನ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಬೆಂಗಳೂರಿನಲ್ಲಿ ಬಸ್ ಚಲಾಯಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಎರಡು ದಿನಗಳ ಹಿಂದಷ್ಟೇ ಸೀಬರ್ಡ್ ಕಂಪನಿಯ ಬಸ್ ಚಿತ್ರದುರ್ಗದ ಗೊರ್ಲತ್ತು ಕ್ರಾಸ್ ಬಳಿ ಅಪಘಾತಕ್ಕೀಡಾಗಿ 7 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಸೀಬರ್ಡ್ ಬಸ್ ಚಾಲಕ ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀ ಬರ್ಡ್ ಬಸ್ ಅನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಚಾಲಕ, ಉಪ್ಪಾರಪೇಟೆ ಸಂಚಾರಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ತಪಾಸಣೆಯಲ್ಲಿ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರೆ. ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಬೇರೆ ಚಾಲಕನ ವ್ಯವಸ್ಥೆ ಮಾಡಿ ಬಸ್ ಅನ್ನು ಗೋವಾಕ್ಕೆ ಕಳುಹಿಸಲಾಗಿದೆ.
ಇನ್ನು ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ನಗರದ 140ಕ್ಕೂ ಹೆಚ್ಚು ಪಾಯಿಂಟ್‌ಗಳಲ್ಲಿ ಶುಕ್ರವಾರ ರಾತ್ರಿ ನಡೆಸಿದ ತಪಾಸಣೆ ನಡೆಸಿದ್ದು, 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಒಟ್ಟು 1500ಕ್ಕೂ ಹೆಚ್ಚು ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ.

