ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಸದ್ಯಕ್ಕೆ ಜಾಮೀನು ಸೀಗೋದಿಲ್ಲ ಎಂಬುದು ಖಚಿತವಾಗಿದೆ. ಇನ್ನೂ ಒಂದು ವರ್ಷಗಳ ಕಾಲ ದರ್ಶನ್ ಗೆ ಜೈಲು ವಾಸ ಫಿಕ್ಸ್ ಆಗಿದೆ. ಮುಂದಿನ ವರ್ಷ ಮೇ ಒಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದಿದ್ದರೆ ದರ್ಶನ್ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿದೆ. ಇದರ ಬೆನ್ನಲ್ಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್ ಮತ್ತು ಜಡ್ಜ್ ಬದಲಾಗಲಿದ್ದಾರೆ ಎಂದು ತಿಳಿದುಬಂದಿದೆ..
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಕೇಸ್ ಗೆ ಸಂಬಂಧಿಸಿದಂತೆ ಕೆಲ ಕೋರ್ಟ್ಗಳ ಪೊಲೀಸ್ ಠಾಣೆ ವ್ಯಾಪ್ತಿ ಮರು ನಿಗದಿ ಆಗಿದೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಕೇಸ್ ಸಿಸಿಹೆಚ್ 57ರನಿಂದ ಸಿಸಿಹೆಚ್ 59ನೇ ಕೋರ್ಟ್‌ಗೆ ವರ್ಗಾವಣೆಯಾಗಲಿದೆ. ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಆದೇಶ ಹೊರಡಿಸಿದ್ದು, ಜೂನ್ 1ರಿಂದ ಅಧಿಕೃತವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಒಂದು ವರ್ಷದ ಒಳಗಾಗಿ ಈ ಪ್ರಕರಣದ ಎಲ್ಲಾ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಈಗಾಗಲೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟ್ ವಾರಕ್ಕೆ ಕನಿಷ್ಠ ಎರಡು ಬಾರಿ, ಅಥವಾ ವಾರದಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಜಾಮೀನು ಅರ್ಜಿ ವಜಾಗೊಂಡಿರುವುದು ದರ್ಶನ್‌ಗೆ ಹಿನ್ನಡೆಯಾಗಿದ್ದು, ಇದರ ಬೆನ್ನಲ್ಲೇ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂಬುದು ಖಚಿತವಾಗಿದೆ.

