HomeLatest Newsದೃಶ್ಯಂ 3 ವಿಮರ್ಶೆ: ಥ್ರಿಲ್ ಇಲ್ಲ, ಸಸ್ಪೆನ್ಸ್ ಇಲ್ಲ, ತಲೆ ನೋವಿನ ಮೆರವಣಿಗೆ; ಇದು ದೃಶ್ಯಂ...

ದೃಶ್ಯಂ 3 ವಿಮರ್ಶೆ: ಥ್ರಿಲ್ ಇಲ್ಲ, ಸಸ್ಪೆನ್ಸ್ ಇಲ್ಲ, ತಲೆ ನೋವಿನ ಮೆರವಣಿಗೆ; ಇದು ದೃಶ್ಯಂ ಚಿತ್ರ ಸರಣಿಯ ವೀಕ್ ಚಿತ್ರ!

ದೃಶ್ಯಂ ನಿರ್ದೇಶಕ ಜೀತು ಜೋಸೆಫ್ ಬತ್ತಳಿಕೆಯಿಂದ ಹೊರಬಿದ್ದ ಮಾಸ್ಟರ್‌ಪೀಸ್. ಮಧ್ಯಮ ಕುಟುಂಬದ ಜಾರ್ಜ್ ಕುಟ್ಟಿ ಮಗಳ ಮೇಲೆ ನಡೆಯುವ ಕಿರುಕುಳದ ವಿರುದ್ಧ ತಿರುಗಿಬೀಳುವ ತಾಯಿ ಹಾಗೂ ಮಗಳು ಮಾಡುವ ಕೊಲೆಯನ್ನು ಮುಚ್ಚಿಹಾಕಿದ ಜಾರ್ಜ್ ಕುಟ್ಟಿ ಆತ ಪೊಲೀಸ್ ಅಧಿಕಾರಿಯ ಮಗನಾದ ಕಾರಣ ಸಂಕಷ್ಟಕ್ಕೆ ಸಿಲುಕಿಹಾಕಿಕೊಳ್ಳುವುದು ನಿಮಗೆ ತಿಳಿದೇ ಇದೆ.

ಇದು ಮೊದಲ ಚಿತ್ರ ದೃಶ್ಯಂನ ಕಥೆಯಾಗಿದ್ದು, ನಡೆದ ಈ ಕೊಲೆಯಿಂದ ಇಡೀ ಕುಟುಂಬ ವಿಚಾರಣೆ ಎದುರಿಸಿ ಹೇಗೆ ಪಾರಾಗುತ್ತಾರೆ ಎಂಬುದನ್ನು ಕಂಡು ಸಿನಿ ರಸಿಕರು ಅಬ್ಬಾ ಎಂಥ ಥ್ರಿಲ್ಲರ್ ಗುರು ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ನಡೆದ ಕೊಲೆಯ ಶವವನ್ನು ಪೊಲೀಸ್ ಠಾಣೆಯಲ್ಲಿಯೇ ಬಚ್ಚಿಟ್ಟಿದ್ದ ಎಂದು ತೋರಿಸಿ ಮೊದಲ ಚಿತ್ರವನ್ನು ಮುಗಿಸಿದ್ದ ಜೀತು ಜೋಸೆಫ್ ಸೌತ್‌ನ ಕ್ರೇಜಿಯಸ್ಟ್ ಥ್ರಿಲ್ಲರ್ ಡೈರೆಕ್ಟರ್ ಎಂಬುದನ್ನು ಸಾಬೀತುಪಡಿಸಿದ್ದರು. ಬಳಿಕ ಇದೇ ಕಥೆಯನ್ನು ಮತ್ತೆ ಕೆದಕಿ ದೃಶ್ಯಂ 2 ಮಾಡಿದ್ದ ಜೀತು ಜೋಸೆಫ್ ಇಲ್ಲೂ ಸಹ ಥ್ರಿಲ್ಲರ್ ಅಂಶಕಗಳನ್ನು ಹೆಣೆದು ಗೆದ್ದಿದ್ದರು. ತಾನು ಶವ ಮುಚ್ಚಿಡಲು ಸಿನಿಮಾ ಮಾಡಲು ಕಥೆ ಬರೆಸುವ ಜಾರ್ಜ್ ಕುಟ್ಟಿ ಕೊನೆಗೆ ಅದನ್ನೇ ಕೋರ್ಟ್‌ನಲ್ಲಿ ಬಳಸಿ ಪಾರಾಗುವುದು ಸಿನಿ ರಸಿಕರನ್ನು ಎಂಥ ಕ್ಲೈಮ್ಯಾಕ್ಸ್ ಗುರು ಎಂದು ಹುಚ್ಚೆದ್ದು ಹೊಗಳುವ ಹಾಗೆ ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ನಿನ್ನೆ ( ಮೇ 21 ) ಬಿಡುಗಡೆಯಾದ ದಶ್ಯಂ 3 ಈ ಎರಡಕ್ಕೂ ತದ್ವಿರುದ್ಧ. ಈ ಹಿಂದೆ ಕೇಬಲ್ ಆಪರೇಟರ್ ಹಾಗೂ ಚಿತ್ರಮಂದಿರದ ಮಾಲೀಕನಾಗಿದ್ದ ಜಾರ್ಜ್ ಕುಟ್ಟಿ ಇಲ್ಲಿ ಚಿತ್ರದ ನಿರ್ಮಾಪಕ. ದೃಶ್ಯಂ ಚಿತ್ರವನ್ನು ನಿರ್ಮಾಣ ಮಾಡಿ ಗೆಲ್ಲುವ ಮೂಲಕ ಆರಂಭವಾಗುವ ಸಿನಿಮಾ ಮೊದಲಾರ್ಧದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಥೆಯನ್ನು ಹೊಂದಿಲ್ಲ. ಮಧ್ಯಂತರದಲ್ಲಿ ಈ ಹಿಂದೆ ಜಾರ್ಜ್ ಕುಟ್ಟಿಗೆ ಹಿಂಸೆ ನೀಡಿದ್ದ ವ್ಯಕ್ತಿಯೊಬ್ಬ ಜಾರ್ಜ್ ಕುಟ್ಟಿಯ ತೋಟದಲ್ಲೇ ಗುಂಡಿ ತೋಡುವ ದೃಶ್ಯವನ್ನು ತೋರಿಸಿ ಕುತೂಹಲ ಮೂಡಿಸಲಾಗಿದ್ದು, ದ್ವಿತೀಯಾರ್ಧದಲ್ಲಿ ಆ ಅಂಶ ನಾವು ಅಂದುಕೊಂಡ ಮಟ್ಟದ್ದಲ್ಲ ಎಂದು ಪ್ರೇಕ್ಷಕನಿಗೆ ಅರ್ಥವಾಗಿಬಿಡುತ್ತದೆ.

ಚಿತ್ರದುದ್ದಕ್ಕೂ ತನ್ನ ಮೊದಲ ಮಗಳಿಗೆ ಮದುವೆ ಮಾಡಿ ಮುಗಿಸಬೇಕು ಎನ್ನುವ ಓಡಾಟದಲ್ಲೇ ಇರುವ ಕುಟುಂಬ ಹಲವಾರು ಬ್ರೋಕರ್‌ಗಳನ್ನು ಬಳಸಿ ವಿವಿಧ ಸಂಬಂಧಗಳನ್ನು ಸಂಪರ್ಕಿಸುತ್ತದೆ. ಆದರೆ ಮಗಳಿಗಿದ್ದ ಮನೋರೋಗದ ಕಾರಣದಿಂದ ಅನೇಕ ಸಂಬಂಧಗಳು ಮುರಿದುಬೀಳುತ್ತವೆ. ಕೊನೆಗೆ ತನ್ನ ಸುತ್ತ ಇರುವ ಜನರೇ ಆಕೆಯ ಬಗ್ಗೆ ಮಾಹಿತಿ ನೀಡಿ ಮದುವೆ ಮುರಿಯುತ್ತಿದ್ದಾರೆ ಎನ್ನುವುದನ್ನು ಅರಿಯುವ ಜಾರ್ಜ್ ಕುಟ್ಟಿಗೆ ತಾವು ಮಾಡಿದ ಹಳೆ ಕರ್ಮ ತನ್ನನ್ನು ಮತ್ತೆ ಹುಡುಕಿಕೊಂಡು ಬಂದಿದೆ ಎಂಬುದನ್ನು ಅರಿಯುತ್ತಾನೆ.

ಚಿತ್ರದ ಒನ್‌ಲೈನ್ ಕಥೆಯನ್ನು ಹೇಳುವುದಾದರೆ ಮೊದಲ ಮಗಳ ಮದುವೆಯನ್ನು ಕಷ್ಟಪಟ್ಟು ಮಾಡಿ ಅದರಿಂದ ಕೊನೆಯ ಹತ್ತು ನಿಮಿಷದಲ್ಲಿ ಇಡೀ ಕುಟುಂಬ ಟ್ರ್ಯಾಪ್‌ನಲ್ಲಿ ಸಿಲುಕಿಕೊಳ್ಳುವುದನ್ನು ಜಾರ್ಜ್ ಕುಟ್ಟಿ ತಪ್ಪಿಸುತ್ತಾನಾ ಇಲ್ಲವೇ ಎಂಬುದೇ ಒನ್‌ಲೈನ್ ಕಥೆ. ಅಂದಹಾಗೆ ಕೊನೆಯ ಹತ್ತು ನಿಮಿಷಗಳಲ್ಲಿ ಬರುವ ಒಂದೆರಡು ಓಹ್ ಎನ್ನುವ ದೃಶ್ಯಗಳೇ ದೃಶ್ಯ 3 ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್‌ಗಳು. ನೆಗೆಟಿವ್ ಬಗ್ಗೆ ಈಗಾಗಲೇ ಸಾಕಷ್ಟು ಹೇಳಾಗಿರುವುದರಿಂದ ಅದರ ಅಗತ್ಯವಿಲ್ಲ ಎನ್ನಬಹುದು. ಚಿತ್ರಕ್ಕೆ ‘ದೃಶ್ಯಂ 3’ ಎಂದು ಹೆಸರು ಇಡುವ ಬದಲು ‘ಅರೇಂಜ್ ಮ್ಯಾರೇಜ್ ರಂಪಾಟ’ ಎಂದು ಹೆಸರಿಟ್ಟಿದ್ದರೆ ಸೂಕ್ತವಾಗಿರುತ್ತಿತ್ತೇನೋ.

ನಿರ್ದೇಶಕ ಈ ನಡುವೆ ಹಲವಾರು ಬಾರಿ ಸಸ್ಪೆನ್ಸ್ ಹುಟ್ಟುಹಾಕುವ ಕೆಲಸವನ್ನು ಮಾಡಿದ್ದಾರಾದರೂ ಎಲ್ಲಿಯೂ ಅದು ಕೆಲಸ ಮಾಡಿಲ್ಲ. ಒಮ್ಮೆಯೂ ಮುಂದೇನಾಗಲಿದೆ ಎನ್ನುವ ಪ್ರಶ್ನೆಯನ್ನೇ ಹುಟ್ಟುಹಾಕದೇ ಸಾಗುವ ಕಥೆ ಅತಿ ಸಪ್ಪೆಯಾಗಿದ್ದು, ನೋಡುಗನ ತಾಳ್ಮೆ ಪರೀಕ್ಷೆ ನಡಯಲಿದೆ. ದೃಶ್ಯಂ ಮೊದಲ ಹಾಗೂ ಎರಡನೇ ಭಾಗದ ಹಾಗೆ ಇಲ್ಲಿ ಥ್ರಿಲ್ಲರ್ ಅಂಶಗಳಿಗೆ ಎಂದೇನಾದರೂ ನಿರೀಕ್ಷೆಯೊಂದಿಗೆ ಬಂದರೆ ಇದೊಂದು ತಲೆ ನೋವಿನ ಮೆರವಣಿಗೆಯಾಗದೇ ಇರಲಾರದು. ಚಿತ್ರಮಂದಿರಕ್ಕೆ ಬಂದ ಸಿನಿ ರಸಿಕರಿಗೆ ಮೋಹನ್‌ಲಾಲ್ ನಟನೆ ದೃಶ್ಯಂ ಚಿತ್ರ ಸರಣಿಯ ಈ ಅತಿ ವೀಕ್ ಸಿನಿಮಾವನ್ನು ಕಾಪಾಡಿದ ಅಂಶ ಎನ್ನಲಾಗದು, ಹೇಗೋ ಇವರಿಂದಾದರೂ ನೋಡುಬಹುದು ಎನಿಸುವುದಂತೂ ಪಕ್ಕಾ. ಅಂದಹಾಗೆ ಕನ್ನಡ ಡಬಿಂಗ್ ಅದ್ಭುತವಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular