ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಅವರ ಮೇಲೆ ಐಟಿ ದಾಳಿಯಾಗಿತ್ತು. ಕಚೇರಿಯಲ್ಲಿ ಐಟಿ ಅಧಿಕಾರಿಗಳು ಇರುವಾಗಲೇ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೂರಾರು ಕೋಟಿ ರೂ. ಆಸ್ತಿ ಹೊಂದಿರುವ ಸಿ.ಜೆ.ರಾಯ್ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಮೂಲಕ ಸದಾ ಜನರ ಸಂಪರ್ಕದಲ್ಲಿರುತ್ತಿದ್ದರು. ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸೇರಿದಂತೆ ವಿವಿಧ ಉದ್ಯಮದಲ್ಲಿ ತೊಡಗಿದ್ದರು.
ಐಷಾರಾಮಿ ಕಾರುಗಳನ್ನು ಹೊಂದಿರುವ ಸಿ.ಜೆ.ರಾಯ್ ಮೊದಲು ಬಳಕೆ ಮಾಡಿದ್ದ ಕಾರು ಮಾರುತಿ-800. ಅಚ್ಚರಿಯ ಸಂಗತಿ ಎಂದರೆ ಅದೇ ಕಾರನ್ನು ಅವರು 27 ವರ್ಷಗಳ ಬಳಿಕ ಹುಡುಕಿದ್ದರು. ಅದನ್ನು 10 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದರು.
ಮಾರುತಿ ಕಾರಿನ ಕಥೆ: ಡಾ.ಸಿ.ಜೆ.ರಾಯ್ ಭಾರತದ ಬಿಲಿಯನೇರ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ರಿಯಲ್ ಎಸ್ಟೇಟ್ ಸಮೂಹದ ಸಂಸ್ಥಾಪಕ ಅಧ್ಯಕ್ಷರು. 1991ರಲ್ಲಿ ಅವರು ಈ ಕಂಪನಿಯನ್ನು ಸ್ಥಾಪಿಸಿದ್ದರು. ಈಗ ಬಹಳ ದೂರ ಸಾಗಿ ಬಂದಿರುವ ಅವರು ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.
ಸಿ.ಜೆ.ರಾಯ್ ಅನೇಕ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಇದೆಲ್ಲದಕ್ಕೂ ಮೂಲ ಒಂದು ಸಾಧಾರಣ ಮಾರುತಿ 800 ಕಾರು. ಇತ್ತೀಚೆಗೆ ಅವರು ಅಂದರೆ 27 ವರ್ಷಗಳ ನಂತರ ಅದೇ ಹಳೆಯ ಕಾರನ್ನು ಮತ್ತೆ ಕಂಡುಕೊಂಡಿದ್ದರು. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. 10 ಲಕ್ಷ ರೂಪಾಯಿಗೆ ತಮ್ಮ ಮೊದಲ ಕಾರನ್ನು ಅವರು ಮರಳಿ ಖರೀದಿಸಿದ್ದರು.
ಸಿ.ಜೆ.ರಾಯ್ ಸಾಮಾಜಿಕ ಜಾಲತಾಣದಲ್ಲಿ ಕಾರಿನ ವಿಡಿಯೋ ಇದೆ. ಆ ವಿಡಿಯೋದಲ್ಲಿ ಅವರು ತಮ್ಮ ಮೊದಲ ಕಾರು ಮಾರುತಿ 800 ಬಗ್ಗೆ ಮಾತನಾಡಿದ್ದಾರೆ. ಅವರು 1994ರಲ್ಲಿ ಅಂದರೆ ತಮ್ಮ 25ನೇ ವಯಸ್ಸಿನಲ್ಲಿ ಈ ಕಾರನ್ನು ಖರೀದಿಸಿದ್ದರು.
ಅವರು ಕೆಲವು ವರ್ಷಗಳ ಕಾಲ ಕಾರನ್ನು ಬಳಸಿದರು ಮತ್ತು ನಂತರ ಎಸ್ಟೀಮ್ ಖರೀದಿ ಮಾಡಿದ ಕಾರಣ ಮಾರುತಿ 800 ಮಾರಾಟ ಮಾಡಿದ್ದರು. ಬಳಿಕ ಅವರು ಅನೇಕ ಕಾರುಗಳನ್ನು ಖರೀದಿಸಿದ್ದರು. ಆದರೆ, ಮನಸ್ಸಿನಲ್ಲಿ ಅವರು ಮಾರುತಿ 800 ಕಾರು ಮಿಸ್ ಮಾಡಿಕೊಳ್ಳುತ್ತಿದ್ದರು.
ತಮ್ಮ ಮೊದಲ ಕಾರಿನ ನಂಬರ್ CKJ 3637. ಈ ಸಂಖ್ಯೆಯ ಕಾರನ್ನು ಹುಡುಕಲು ಸಹಾಯ ಮಾಡುವಂತೆ ಅವರು ತಮ್ಮ ಫಾಲೋವರ್ಸ್‌ಗಳಲ್ಲಿ ವಿನಂತಿಸಿಕೊಂಡಿದ್ದರು. ಆ ಕಾರನ್ನು ಮರಳಿ ಪಡೆಯಲು 10 ಲಕ್ಷ ರೂಪಾಯಿ ವೆಚ್ಚ ಮಾಡಲು ಸಿದ್ಧವಿರುವುದಾಗಿ ಅವರು ವಿಡಿಯೋದಲ್ಲಿ ತಿಳಿಸಿದ್ದರು.
ಸಿ.ಕೆ.ರಾಯ್ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಕೇವಲ ಒಂದು ವಾರದೊಳಗೆ ಸಿ.ಜೆ. ರಾಯ್ ಅವರ ಮೊದಲ ಮಾರುತಿ 800 ಕಾರು ಸಿಕ್ಕಿತ್ತು. ಯಾವುದೋ ಕಾರಣಕ್ಕಾಗಿ ಅದರ ಮಾಲೀಕರು ಕಾರನ್ನು ಓಡಿಸುತ್ತಿರಲಿಲ್ಲ.
ಸಿ.ಜೆ. ರಾಯ್ ಅವರ ಆಸೆಯಂತೆ ಕಾರು ಅವರ ಕೈ ಸೇರಿತು. 1994ರಲ್ಲಿ ಅವರು ಈ 1.10 ಲಕ್ಷ ರೂಪಾಯಿಗೆ ಅದನ್ನು ಖರೀದಿಸಿದ್ದರು. ಮರಳಿ ಅದನ್ನು ಪಡೆಯಲು ಸುಮಾರು 10 ಲಕ್ಷ ರೂ. ಖರ್ಚು ಮಾಡಿದರು.
ಸಿ.ಜೆ.ರಾಯ್ ರೋಲ್ಸ್-ರಾಯ್ಸ್, ಲಂಬೋರ್ಘಿನಿ ಮತ್ತು ಬುಗಾಟಿ ವೇರಾನ್‌ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಅವರು ತಮ್ಮ ಮೊದಲ ಕಾರನ್ನು ಸಹ ಪುನಃ ಖರೀದಿ ಮಾಡುವ ಮೂಲಕ ಸುದ್ದಿ ಮಾಡಿದ್ದರು.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

