ಮಹಿಳಾ ದೆಹಲಿ ಪ್ರೀಮಿಯರ್ ಲೀಗ್ 2026ರ ಪಂದ್ಯವೊಂದರಲ್ಲಿ ಮೈದಾನದಲ್ಲಿ ಕುತೂಹಲಕಾರಿ ಸನ್ನಿವೇಶವೊಂದು ನಡೆದಿದೆ. ಈಸ್ಟ್ ಡೆಲ್ಲಿ ರೈಡರ್ಸ್ ಮತ್ತು ಸೆಂಟ್ರಲ್ ಡೆಲ್ಲಿ ಕ್ವೀನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಬಾರತಿ ರಾವಲ್ ಅವರು ಮೇಧಾವಿ ಬಿಧುರಿ ಅವರ ವಿಕೆಟ್ ಪಡೆದ ನಂತರ, ಅವರದೇ ಶೈಲಿಯ ಸಂಭ್ರಮಾಚರಣೆಯನ್ನು ಅನುಕರಿಸಿ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ವೈರಲ್ ಆಗಿದ್ದ ‘6-7’ ಶೈಲಿಯ ಹಸ್ತಚಾಲನದ ಸಂಭ್ರಮಾಚರಣೆಯ ಮೂಲಕವೇ ಮೇಧಾವಿ ಬಿಧುರಿ ಸದ್ದು ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ಔಟಾದ ಮೇಧಾವಿ ಅವರನ್ನು ಬೀಳ್ಕೊಡುವಾಗ, ಬಾರತಿ ರಾವಲ್ ಅದೇ ಶೈಲಿಯಲ್ಲಿ ಸಂಭ್ರಮಿಸಿ ಗಮನ ಸೆಳೆದರು. ಕ್ರೀಡಾಂಗಣದಲ್ಲಿ ನಡೆದ ಈ ಘಟನೆ ಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಸೆಂಟ್ರಲ್ ಡೆಲ್ಲಿ ಕ್ವೀನ್ಸ್ ವಿರುದ್ಧ 19 ರನ್‌ಗಳ ಅದ್ಭುತ ಗೆಲುವು ಸಾಧಿಸಿತು. ಪೂರ್ವಾ ಸಿವಾಚ್ ಬೌಲಿಂಗ್‌ನಲ್ಲಿ ಮಿಂಚಿದರೆ, ಬಾರತಿ ರಾವಲ್ 33 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಕೇವಲ ಬೌಲಿಂಗ್ ಮಾತ್ರವಲ್ಲದೆ ತಮ್ಮ ಈ ವಿಶಿಷ್ಟ ಸಂಭ್ರಮಾಚರಣೆಯ ಮೂಲಕವೂ ಅವರು ಪಂದ್ಯದ ಹೈಲೈಟ್ ಎನಿಸಿಕೊಂಡರು.
ಇತ್ತೀಚೆಗೆ ಯುವ ಜನತೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ‘6-7’ ಆಚರಣೆಯ ಟ್ರೆಂಡ್ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಜಾಗತಿಕ ಮಟ್ಟದ ವಿವಿಧ ಕ್ರೀಡೆಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಈಗ ಮಹಿಳಾ ಲೀಗ್‌ನಲ್ಲೂ ಇದು ದೊಡ್ಡ ಮಟ್ಟದ ರಂಜನೆಗೆ ಕಾರಣವಾಗಿದೆ.

