ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿ ದಾಳಿ ನಡೆಸಿದ್ದು, ಟ್ರಂಪ್ ಹಾಗೂ ಇತರರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ವೈಟ್ ಹೌಸ್ ವತಿಯಿಂದ ವಾಷಿಂಗ್ಟನ್ ನ ಹಿಲ್ಟನ್ ಹೋಟೆಲ್ ನಲ್ಲಿ ವರದಿಗಾರರ ಔತಣಕೂಟದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದಾಗ ತಪ್ಪಿಸಿಕೊಂಡು ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಟೇಬಲ್ ಕೆಳಗೆ ಕುಳಿತು ತಮ್ಮನ್ನು ರಕ್ಷಿಸಿಕೊಂಡಿದ್ದಾರೆ, ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ಸುತ್ತುವರೆದು, ಬೇರೆಡೆ ಕರೆದೊಯ್ದಿದ್ದಾರೆ. ಇದೇ ವೇಳೆ ದಾಳಿಕೋರನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ದಾಳಿಕೋರನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿರುವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಹೇಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ ಎಂಬ ರಣರೀಚಕ ದೃಶ್ಯ ವಿಡಿಯೋದಲ್ಲಿದೆ.
ಗುಂಡಿನ ದಾಳಿ ಬಳಿಕ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನನ್ನ ಮೇಲಿನ ದಾಳಿ ಹೊಸದೇನಲ್ಲ. ಈ ಹಿಂದೆಯೂ ನನ್ನ ಮೇಲೆ ದಾಳಿ ನಡೆದಿತ್ತು. ಪ್ರಸ್ತುತ ನಡೆದ ದಾಳಿಯಲ್ಲಿ ಸೀಕ್ರೇಟ್ ಸರ್ವಿಸ್ ನನ್ನನ್ನು ರಕ್ಷಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಎಲ್ಲರೂ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಎಲ್ಲರೂ ಸುರಕ್ಷಿತರಾಗಿದ್ದಾರೆ. ಇನ್ನು ದಾಳಿ ಕೋರನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಅತನನ್ನು ಥಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ. ದಾಳಿಕೋರ ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಎಂದು ತಿಳಿದುಬಂದಿದೆ. ಆತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಶೂಟರ್ ಪಕ್ಕಾ ಪ್ಲಾನ್ ಮಾಡಿಕೊಂಡೇ ಹಲವು ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ. ಔತಣಕೂಟದ ಆಹ್ವಾನ ಪತ್ರಿಕೆ ಪಡೆದುಕೊಂಡೇ ಮೊದಲೇ ಹಿಲ್ಟನ್ ಹೋಟೆಲ್ ನಲ್ಲಿ ರೂಮ್ ಪಡೆದು ತಂಗಿದ್ದ ಎಂಬುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

