ದೇಶಾದ್ಯಂತ E20 ಪೆಟ್ರೋಲ್ ಕುರಿತು ಚರ್ಚೆ ತೀವ್ರಗೊಂಡಿರುವ ನಡುವೆ, ಈ ಇಂಧನದಿಂದ ವಾಹನಗಳ ಎಂಜಿನ್ ಹಾನಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಸಂದರ್ಭದಲ್ಲೇ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ಇಥನಾಲ್ ಮಿಶ್ರಿತ ಪೆಟ್ರೋಲ್ನ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ದೇಶದ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ಕಠಿಣ ಗುಣಮಟ್ಟ ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರದ ಪ್ರಕಾರ, ವಾಹನ ಮಾಲೀಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು (OMCs) ಇಂಧನದ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಈಗಿರುವ ಪರೀಕ್ಷೆಗಳ ಜೊತೆಗೆ ಇಂಧನದಲ್ಲಿ ಕಲಬೆರಕೆ ಅಥವಾ ಮಾಲಿನ್ಯ ತಡೆಯಲು ಹೆಚ್ಚುವರಿ ತಪಾಸಣೆಗಳನ್ನೂ ನಡೆಸಲಾಗುತ್ತಿದೆ.ದೇಶಾದ್ಯಂತ ಇರುವ 87 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿದಿನ 8ರಿಂದ 12 ಬಾರಿ ಇಂಧನದಲ್ಲಿ ನೀರು ಸೇರಿರುವುದೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇದಲ್ಲದೆ, ಕ್ಲೋರೈಡ್ ಮತ್ತು ಸಲ್ಫೈಡ್ ಮಾಲಿನ್ಯ ಪತ್ತೆಗಾಗಿ ಇದುವರೆಗೆ 2 ಸಾವಿರಕ್ಕೂ ಹೆಚ್ಚು ಇಂಧನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಕೇವಲ ಎರಡು ಪೆಟ್ರೋಲ್ ಬಂಕ್ಗಳಲ್ಲಿ ಮಾತ್ರ ಕ್ಲೋರೈಡ್ ಮಾಲಿನ್ಯ ಪತ್ತೆಯಾಗಿದ್ದು, ಆ ಬಂಕ್ಗಳಲ್ಲಿ ತಕ್ಷಣವೇ ಇಂಧನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಂಧನದಲ್ಲಿ ಕಲಬೆರಕೆ ಅಥವಾ ಮಾಲಿನ್ಯ ಕಂಡುಬಂದರೆ ಸಂಬಂಧಿತ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
E20 ಪೆಟ್ರೋಲ್ ತಯಾರಿಯಲ್ಲಿ ಬಹುಹಂತದ ಗುಣಮಟ್ಟ ಪರಿಶೀಲನೆ
ಜನರಲ್ಲಿ ವಿಶ್ವಾಸ ಮೂಡಿಸಲು E20 ಪೆಟ್ರೋಲ್ ತಯಾರಿಕೆ ಮತ್ತು ಪೂರೈಕೆ ಪ್ರಕ್ರಿಯೆಯ ವಿವರಗಳನ್ನೂ ಕೇಂದ್ರ ಸರ್ಕಾರ ಹಂಚಿಕೊಂಡಿದೆ. ವಾಹನದ ಟ್ಯಾಂಕ್ಗೆ ಇಂಧನ ತಲುಪುವ ಮುನ್ನವೇ ಗುಣಮಟ್ಟ ಪರೀಕ್ಷೆಗಳು ಆರಂಭವಾಗುತ್ತವೆ ಎಂದು ತಿಳಿಸಿದೆ.
E20 ಪೆಟ್ರೋಲ್ ತಯಾರಿಕೆಗೆ ಬಳಸುವ ಇಥನಾಲ್ ಖರೀದಿಯಿಂದಲೇ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರತಿಯೊಂದು ಇಥನಾಲ್ ಬ್ಯಾಚ್ ಕೂಡ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಗದಿಪಡಿಸಿರುವ IS 15464 ಮಾನದಂಡಗಳಿಗೆ ಅನುಗುಣವಾಗಿರಬೇಕು. ಇಥನಾಲ್ನಲ್ಲಿ ಕನಿಷ್ಠ 99.6 ಶೇಕಡಾ ಶುದ್ಧತೆ ಕಡ್ಡಾಯವಾಗಿದೆ.
ಡಿಸ್ಟಿಲರಿಯಿಂದ ತೈಲ ಕಂಪನಿಗಳ ಡಿಪೋಗಳಿಗೆ ಕಳುಹಿಸುವ ಪ್ರತಿಯೊಂದು ಇಥನಾಲ್ ಸಾಗಣೆಯೊಂದಿಗೆ ಗುಣಮಟ್ಟ ಪ್ರಮಾಣಪತ್ರವನ್ನೂ ಕಳುಹಿಸಲಾಗುತ್ತದೆ. ನಿಗದಿತ ಮಾನದಂಡಗಳನ್ನು ಪೂರೈಸಿದ ನಂತರವೇ ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ
ಗುಣಮಟ್ಟ ಪರೀಕ್ಷೆಗಳು ಕೇವಲ ಹೆಸರಿಗೆ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 2024ರಿಂದ ಜೂನ್ 2026ರವರೆಗೆ ಗುಣಮಟ್ಟದ ಮಾನದಂಡಗಳನ್ನು ಪೂರೈಸದ 302 ಟ್ಯಾಂಕರ್ಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ ಸುಮಾರು 10,500 ಕಿಲೋಲೀಟರ್ ಇಥನಾಲ್ ಇತ್ತು.ಇಥನಾಲ್ನ ಶುದ್ಧತೆ, ನೀರಿನ ಪ್ರಮಾಣ ಹಾಗೂ ಸಾಂದ್ರತೆಯಲ್ಲಿ ದೋಷಗಳು ಕಂಡುಬಂದ ಕಾರಣ ಈ ಟ್ಯಾಂಕರ್ಗಳನ್ನು ತಿರಸ್ಕರಿಸಲಾಗಿದೆ. ಗುಣಮಟ್ಟವಿಲ್ಲದ ಇಂಧನ ಸಾರ್ವಜನಿಕರಿಗೆ ತಲುಪುವ ಮೊದಲುವೇ ಅದನ್ನು ಪೂರೈಕೆ ಸರಪಳಿಯಿಂದ ಹೊರಗಿಡುವ ಕಠಿಣ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಚಿವಾಲಯ ತಿಳಿಸಿದೆ.
ಗುಣಮಟ್ಟ ದೃಢಪಟ್ಟ ಬಳಿಕವೇ ಇಥನಾಲ್ ಅನ್ನು ಪ್ರತ್ಯೇಕ ಸಂಗ್ರಹ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಇತರ ಇಂಧನಗಳೊಂದಿಗೆ ಕಲಬೆರಕೆಯಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಡಿಪೋದಲ್ಲಿ ಟ್ಯಾಂಕರ್ ಸ್ವೀಕರಿಸುವ ಮೊದಲು ಅದರ ಮೇಲ್ಭಾಗ ಹಾಗೂ ಕೆಳಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇಥನಾಲ್ ಅನ್ನು ಪೆಟ್ರೋಲ್ನೊಂದಿಗೆ ಮಿಶ್ರಣ ಮಾಡಿ E20 ಇಂಧನ ತಯಾರಿಸಿದ ಬಳಿಕವೂ ಗುಣಮಟ್ಟ ಪರೀಕ್ಷೆಗಳು ಮುಂದುವರಿಯುತ್ತವೆ. ಅಂತಿಮವಾಗಿ ಪೆಟ್ರೋಲ್ ಬಂಕ್ಗಳಿಗೆ ತಲುಪುವವರೆಗೂ ಪ್ರತಿಯೊಂದು ಹಂತದಲ್ಲೂ ನಿಗಾ ಇಡಲಾಗುತ್ತದೆ.
ಕೇಂದ್ರದ ಸ್ಪಷ್ಟ ಸಂದೇಶ
ಇಥನಾಲ್ ಖರೀದಿಯಿಂದ ಆರಂಭಿಸಿ, ಡಿಪೋ ಸಂಗ್ರಹಣೆ, E20 ಪೆಟ್ರೋಲ್ ತಯಾರಿಕೆ ಹಾಗೂ ಪೆಟ್ರೋಲ್ ಬಂಕ್ಗಳಿಗೆ ಪೂರೈಕೆ ಮಾಡುವವರೆಗೂ ಬಹುಹಂತದ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇಂಧನ ಮಾಲಿನ್ಯ ಅಥವಾ ಕಲಬೆರಕೆ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.

