ಇನ್ಸ್ಟಾಗ್ರಾಂ ಬಳಸುವವರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಮೆಟಾ ಪರಿಚಯಿಸಿರುವ ಹೊಸ AI ಚಿತ್ರ ರಚನೆ (Image Generation) ವೈಶಿಷ್ಟ್ಯದಿಂದ, ಸಾರ್ವಜನಿಕ (Public) ಖಾತೆಯಲ್ಲಿರುವ ನಿಮ್ಮ ಫೋಟೋಗಳನ್ನು ಆಧರಿಸಿ ನಿಮ್ಮನ್ನು ಹೋಲುವ AI ಚಿತ್ರಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಇದಕ್ಕೆ ನಿಮ್ಮ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ ಎನ್ನುವುದು ಆತಂಕಕ್ಕೆ ಕಾರಣವಾಗಿದ್ದು, ಬಳಕೆದಾರರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕೆಲವು ಸೆಟ್ಟಿಂಗ್‌ಗಳನ್ನು ತಕ್ಷಣವೇ ಪರಿಶೀಲಿಸುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಹೌದು.ಮೆಟಾ ಇತ್ತೀಚೆಗೆ “ಇಮ್ಯಾಜಿನ್ ಇಮೇಜ್” (Imagine Image) ಎಂಬ ಹೊಸ AI ಚಿತ್ರ ರಚನೆ ಸೌಲಭ್ಯವನ್ನು ಪರಿಚಯಿಸಿದೆ. ಸದ್ಯಕ್ಕೆ ಈ ವೈಶಿಷ್ಟ್ಯ Meta AI, Instagram Stories ಹಾಗೂ WhatsApp ಸಂಭಾಷಣೆಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ Facebook ಮತ್ತು Messengerಗೂ ವಿಸ್ತರಿಸಲಾಗುತ್ತದೆ. ಬಳಕೆದಾರರು ತಮಗೆ ಬೇಕಾದ ಚಿತ್ರದ ಬಗ್ಗೆ ಪದಗಳಲ್ಲಿ ವಿವರಿಸಿದರೆ, AI ಅದರ ಆಧಾರದ ಮೇಲೆ ಹೊಸ ಚಿತ್ರವನ್ನು ಸೃಷ್ಟಿಸುತ್ತದೆ. ಎರಡು ಅಥವಾ ಮೂರು ಫೋಟೋಗಳನ್ನು ಒಂದಾಗಿ ಸಂಯೋಜಿಸುವುದು, ಫೋಟೋದ ಒಂದು ಭಾಗವನ್ನು ಮಾತ್ರ ಬದಲಾಯಿಸುವುದು, ಚಿತ್ರಕ್ಕೆ ಪಠ್ಯ ಸೇರಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಈ ಹೊಸ ವೈಶಿಷ್ಟ್ಯ ಮಾಡಬಲ್ಲದು.
ವಿವಾದ ಏಕೆ?
ಸಾರ್ವಜನಿಕವಾಗಿ (Public) ಕಾಣುವ ಇನ್‌ಸ್ಟಾಗ್ರಾಂ ಖಾತೆಯನ್ನು ಉಲ್ಲೇಖಿಸಿ AIಗೆ ಸೂಚನೆ ನೀಡಿದರೆ, ಆ ಖಾತೆಯಲ್ಲಿರುವ ಫೋಟೋಗಳನ್ನು ಆಧರಿಸಿ ಆ ವ್ಯಕ್ತಿಯ ಮುಖವನ್ನು ಹೋಲುವ ಹೊಸ AI ಚಿತ್ರಗಳನ್ನು ರಚಿಸಬಹುದು. ಇದಕ್ಕಾಗಿ ಆ ವ್ಯಕ್ತಿಯ ಅನುಮತಿ ಪಡೆಯುವುದಿಲ್ಲ. ಅಷ್ಟೇ ಅಲ್ಲ, ಅವರ ಫೋಟೋಗಳನ್ನು ಈ ರೀತಿ ಬಳಸಲಾಗಿದೆ ಎಂಬ ಮಾಹಿತಿಯನ್ನೂ ಅವರಿಗೆ ತಿಳಿಸಲಾಗುವುದಿಲ್ಲ.ಅಂದರೆ, ನಿಮಗೆ ತಿಳಿಯದೇ ನಿಮ್ಮ ಫೋಟೋಗಳನ್ನು ಆಧರಿಸಿ AI ಚಿತ್ರಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಮೆಟಾ ಹೇಳುವುದೇನು?
AI ಮೂಲಕ ಸೃಷ್ಟಿಯಾದ ಪ್ರತಿಯೊಂದು ಚಿತ್ರದಲ್ಲೂ ಕಾಣಿಸದ ವಿಶೇಷ ಗುರುತು (Invisible Watermark) ಇರುತ್ತದೆ ಎಂದು ಮೆಟಾ ತಿಳಿಸಿದೆ. ಅದರ ಮೂಲಕ ಆ ಚಿತ್ರವು AI ನೆರವಿನಿಂದ ಸೃಷ್ಟಿಯಾಗಿದೆ ಎಂಬುದನ್ನು ಗುರುತಿಸಬಹುದು.ಆದರೆ, ಈಗಾಗಲೇ ಸೃಷ್ಟಿಯಾಗಿರುವ AI ಚಿತ್ರಗಳನ್ನು ಅಳಿಸುವ ಅವಕಾಶ ಇರುವುದಿಲ್ಲ. ಜೊತೆಗೆ, ತಮ್ಮ ಫೋಟೋಗಳನ್ನು AI ಬಳಸದಂತೆ ಸಂಪೂರ್ಣ ನಿಯಂತ್ರಣವನ್ನು ಬಳಕೆದಾರರಿಗೆ ನೀಡಲಾಗುವುದಿಲ್ಲ.
ನಿಮ್ಮ ಫೋಟೋಗಳನ್ನು AI ಬಳಸದಂತೆ ತಡೆಯುವುದು ಹೇಗೆ?
- ಇನ್‌ಸ್ಟಾಗ್ರಾಂ ಆಪ್ ತೆರೆಯಿರಿ.
- ಮೇಲಿನ ಬಲಭಾಗದಲ್ಲಿರುವ ಮೂರು ಗೆರೆಗಳ (☰) ಐಕಾನ್ ಮೇಲೆ ಟ್ಯಾಪ್ ಮಾಡಿ.
- Sharing and Reuse (ಹಂಚಿಕೆ ಮತ್ತು ಮರುಬಳಕೆ) ವಿಭಾಗಕ್ಕೆ ಹೋಗಿ.
- Allow Meta AI to use your content ಎಂಬ ಆಯ್ಕೆಯನ್ನು ತೆರೆಯಿರಿ.
- ಅಲ್ಲಿ Posts ಮತ್ತು Reels ಎರಡರ ಅನುಮತಿಯನ್ನು ನಿಷ್ಕ್ರಿಯಗೊಳಿಸಿ.
ಹೀಗೆ ಮಾಡಿದರೆ, ಇನ್ನು ಮುಂದೆ ನೀವು ಅಪ್‌ಲೋಡ್ ಮಾಡುವ ಹೊಸ ಫೋಟೋಗಳನ್ನು AI ಚಿತ್ರಗಳ ರಚನೆಗೆ ಬಳಸುವುದಿಲ್ಲ.
ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
- ಈ ಬದಲಾವಣೆ ಹಿಂದಿನ ಫೋಟೋಗಳಿಗೆ ಅನ್ವಯಿಸುವುದಿಲ್ಲ.
- ನೀವು ಈಗ ಅನುಮತಿಯನ್ನು ನಿಲ್ಲಿಸಿದರೂ, ಈಗಾಗಲೇ ನಿಮ್ಮ ಫೋಟೋಗಳನ್ನು ಬಳಸಿ ಸೃಷ್ಟಿಸಲಾದ AI ಚಿತ್ರಗಳು ಹಾಗೆಯೇ ಉಳಿಯುತ್ತವೆ.
- ನಂತರ ನಿಮ್ಮ ಖಾತೆಯನ್ನು Private Account ಆಗಿ ಬದಲಾಯಿಸಿದರೂ, ಈಗಾಗಲೇ ರಚಿಸಲಾದ AI ಚಿತ್ರಗಳ ಮೇಲೆ ಅದರ ಯಾವುದೇ ಪರಿಣಾಮ ಇರುವುದಿಲ್ಲ.
- ಈ ಹೊಸ ಆಯ್ಕೆಯು ಸದ್ಯಕ್ಕೆ ಎಲ್ಲ ಬಳಕೆದಾರರಿಗೂ ಲಭ್ಯವಿಲ್ಲ. ಮೆಟಾ ಇದನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ.

