ಇಂದಿನ ಡಿಜಿಟಲ್ ಯುಗದಲ್ಲಿ ಕೆಲಸಕ್ಕಾಗಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕಾಲ ಕಳೆಯುವ ಅನೇಕರು, ಕೆಲಸ ಮುಗಿದ ಬಳಿಕವೂ ವಿಶ್ರಾಂತಿಗಾಗಿ ಮೊಬೈಲ್ ಫೋನ್‌ನಲ್ಲೇ ಸಮಯ ಕಳೆಯುತ್ತಾರೆ.
ಸೋಶಿಯಲ್ ಮೀಡಿಯಾ ಸ್ಕ್ರೋಲಿಂಗ್, ವಿಡಿಯೊ ವೀಕ್ಷಣೆ, ರಾತ್ರಿ ಮಲಗುವವರೆಗೂ ಮೊಬೈಲ್ ಬಳಕೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಒಂದು ಪರದೆಯಿಂದ ಮತ್ತೊಂದು ಪರದೆಗೆ ಬದಲಾಗುವುದು ಕಣ್ಣಿಗೆ ವಿಶ್ರಾಂತಿ ನೀಡುವುದಿಲ್ಲ. ಇದರಿಂದ ಕಣ್ಣುಗಳಷ್ಟೇ ಅಲ್ಲದೆ ನರಮಂಡಲ ಮತ್ತು ನಿದ್ರೆಯ ಗುಣಮಟ್ಟವೂ ಹದಗೆಡಬಹುದು ಎಂದು ಜೀವನಶೈಲಿ ತಜ್ಞರು ಎಚ್ಚರಿಸಿದ್ದಾರೆ.
ಬಹುತೇಕರು ಕೆಲಸ ಮುಗಿದ ಬಳಿಕ ಮೊಬೈಲ್‌ನಲ್ಲಿ ಸಮಯ ಕಳೆಯುವುದನ್ನೇ ವಿಶ್ರಾಂತಿ ಎಂದು ಭಾವಿಸುತ್ತಾರೆ. ಆದರೆ ಕಣ್ಣಿಗೆ ನಿಜವಾದ ವಿಶ್ರಾಂತಿ ಸಿಗುವುದು ಪರದೆಗಳಿಂದ ಸಂಪೂರ್ಣವಾಗಿ ದೂರವಿದ್ದಾಗ ಮಾತ್ರ. ಕಂಪ್ಯೂಟರ್, ಮೊಬೈಲ್, ದೂರದರ್ಶನ ಮೊದಲಾದ ಸಾಧನಗಳನ್ನು ನಿರಂತರವಾಗಿ ನೋಡುವುದರಿಂದ ಕಣ್ಣಿನ ಸ್ನಾಯುಗಳು ಒಂದೇ ದೂರದಲ್ಲಿರುವ ವಸ್ತುಗಳತ್ತ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಇದರಿಂದ ಕಣ್ಣು ಒಣಗುವುದು, ಕಣ್ಣಿನ ಆಯಾಸ, ಉರಿ, ಅಸ್ವಸ್ಥತೆ ಮುಂತಾದ ಸಮಸ್ಯೆಗಳು ಕ್ರಮೇಣ ಹೆಚ್ಚಾಗುತ್ತವೆ.
ಕತ್ತಲೆ ಎಂದರೆ ದೇಹಕ್ಕೆ ಸಹಜ ವಿಶ್ರಾಂತಿ
ತಜ್ಞರ ಪ್ರಕಾರ, ಕತ್ತಲೆ ದೇಹಕ್ಕೆ ಸಹಜ ವಿಶ್ರಾಂತಿಯ ಸಂಕೇತವಾಗಿದೆ. ಸಂಜೆ ಬೆಳಕು ಕಡಿಮೆಯಾಗಿ ಪರದೆಗಳಿಂದ ದೂರವಿದ್ದಾಗ ಮೆದುಳು ನಿದ್ರೆಗೆ ಸಿದ್ಧವಾಗುತ್ತದೆ. ಈ ಸಮಯದಲ್ಲಿ ಮೆಲಟೋನಿನ್ ಹಾರ್ಮೋನ್ ಬಿಡುಗಡೆಯಾಗಿ ದೇಹದ ಜೈವಿಕ ಗಡಿಯಾರ ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಆದರೆ ರಾತ್ರಿ ವೇಳೆಯಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಕೆ ಮುಂದುವರಿದರೆ ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ ನಿದ್ರೆಯ ಗುಣಮಟ್ಟ ಕುಸಿಯುತ್ತದೆ. ಪರದೆಗಳಿಂದ ಹೊರಹೊಮ್ಮುವ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡಿ ದೇಹದ ಸಹಜ ನಿದ್ರೆ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ಸೂಚಿಸಿವೆ.
ಆದ್ದರಿಂದ ಮೊಬೈಲ್‌ನಲ್ಲಿ ನೈಟ್ ಮೋಡ್ ಅಥವಾ ಬ್ಲೂ ಲೈಟ್ ಫಿಲ್ಟರ್ ಬಳಸುವುದರಿಂದ ಮಾತ್ರ ಸಾಕಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಇವು ಬೆಳಕಿನ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೂ, ನಿರಂತರ ನೋಟಿಫಿಕೇಶನ್‌ಗಳು, ಭಾವನೆಗಳ ಮೇಲೆ ಪರಿಣಾಮ ಬೀರುವ ವಿಷಯಗಳು ಹಾಗೂ ಮೆದುಳಿನ ಉದ್ರೇಕವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಮಲಗುವ ಮುನ್ನ ಕಣ್ಣುಗಳಿಗೆ ಮಾತ್ರವಲ್ಲ, ನರಮಂಡಲಕ್ಕೂ ವಿಶ್ರಾಂತಿ ನೀಡುವುದು ಅಗತ್ಯ.
ಡಿಜಿಟಲ್ ಐ ಸ್ಟ್ರೇನ್‌ಗೆ ಪ್ರಮುಖ ಕಾರಣಗಳು
ಡಿಜಿಟಲ್ ಐ ಸ್ಟ್ರೇನ್‌ಗೆ ಪ್ರಮುಖ ಕಾರಣಗಳು ಎಂದರೆ ಹೆಚ್ಚು ಸಮಯ ಹತ್ತಿರದ ಅಂತರದಲ್ಲಿ ಪರದೆಯನ್ನು ನೋಡುವುದು, ಕಡಿಮೆ ಬಾರಿ ಕಣ್ಣು ಮಿಟುಕಿಸುವುದು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ಪರದೆಯ ಮೇಲಿನ ಬೆಳಕಿನ ಪ್ರತಿಫಲನ ಮತ್ತು ಮಧ್ಯೆ ವಿರಾಮವಿಲ್ಲದೆ ಕೆಲಸ ಮಾಡುವುದು.ಆದ್ದರಿಂದ ನಿಯಮಿತವಾಗಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಈ ಸಮಸ್ಯೆಯನ್ನು ಕಡಿಮೆ ಮಾಡಲು ತಜ್ಞರು 20-20-20 ನಿಯಮ ಪಾಲಿಸಲು ಸಲಹೆ ನೀಡುತ್ತಾರೆ. ಪ್ರತಿ 20 ನಿಮಿಷಕ್ಕೊಮ್ಮೆ ಕನಿಷ್ಠ 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಬೇಕು. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ದೊರೆತು ಒತ್ತಡ ಕಡಿಮೆಯಾಗುತ್ತದೆ.
ಇದರ ಜೊತೆಗೆ ಪಾಲ್ಮಿಂಗ್ (Palming) ಎಂಬ ಸರಳ ವಿಧಾನವನ್ನೂ ಅನುಸರಿಸಬಹುದು. ಎರಡೂ ಅಂಗೈಗಳನ್ನು ಪರಸ್ಪರ ಉಜ್ಜಿ ಬಿಸಿಯಾಗುವಂತೆ ಮಾಡಿ, ಕಣ್ಣುಗಳನ್ನು ಮುಚ್ಚಿ ಅವುಗಳ ಮೇಲೆ ಮೆಲ್ಲಗೆ ಇರಿಸಬೇಕು. ಕಣ್ಣುಗಳ ಮೇಲೆ ಒತ್ತಡ ಹಾಕದೆ ನಿಧಾನವಾಗಿ ಉಸಿರಾಡಬೇಕು. ಇದರಿಂದ ಕಣ್ಣುಗಳಿಗೆ ಕತ್ತಲೆ, ಉಷ್ಣತೆ ಮತ್ತು ವಿಶ್ರಾಂತಿ ದೊರೆಯುತ್ತದೆ.
ಒಂದು ವಾರ ಈ ಅಭ್ಯಾಸಗಳನ್ನು ಪಾಲಿಸಿದರೆ..
ಒಂದು ವಾರದವರೆಗೆ ಕೆಲವು ಸರಳ ಅಭ್ಯಾಸಗಳನ್ನು ಪಾಲಿಸಿದರೆ ಉತ್ತಮ ಬದಲಾವಣೆ ಕಾಣಬಹುದು ಎಂದು ತಜ್ಞರು ಹೇಳುತ್ತಾರೆ.
- ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್ ಸ್ಕ್ರೋಲಿಂಗ್ ಹಾಗೂ ವಿಡಿಯೊ ವೀಕ್ಷಣೆಯಂತಹ ಅನಗತ್ಯ ಪರದೆ ಬಳಕೆಯನ್ನು ನಿಲ್ಲಿಸಬೇಕು.
- ಆರಂಭದಲ್ಲಿ ಒಂದು ಗಂಟೆ ಸಾಧ್ಯವಾಗದಿದ್ದರೆ ಕನಿಷ್ಠ 30 ನಿಮಿಷಗಳಿಂದಲೇ ಆರಂಭಿಸಬಹುದು.
- ಮೊಬೈಲ್ ಫೋನ್ ಅನ್ನು ಮಲಗುವ ಕೋಣೆಯಿಂದ ದೂರವಿಡುವುದು ಅಥವಾ ಕನಿಷ್ಠ ಹಾಸಿಗೆಯ ಪಕ್ಕದಲ್ಲಿ ಇಡದಿರುವುದು ಉತ್ತಮ.
- ಮಲಗುವ ಕೋಣೆ ವಿಶ್ರಾಂತಿ ಮತ್ತು ನಿದ್ರೆಗಾಗಿ ಮಾತ್ರ ಇರಬೇಕು; ಅದು ಮತ್ತೊಂದು ಪರದೆ ಬಳಕೆಯ ಸ್ಥಳವಾಗಬಾರದು.
- ಸಂಜೆ ಬಳಿಕ ಅಗತ್ಯ ಕರೆಗಳು, ಸಂದೇಶಗಳು ಮತ್ತು ತುರ್ತು ಆ್ಯಪ್‌ಗಳನ್ನು ಮಾತ್ರ ಬಳಸಬೇಕು. ಉಳಿದ ನೋಟಿಫಿಕೇಶನ್‌ಗಳನ್ನು ಕಡಿಮೆ ಮಾಡುವುದು ಒಳಿತು.
- ರಾತ್ರಿ ವೇಳೆ ಮಂದ ಹಾಗೂ ಬೆಚ್ಚಗಿನ ಬೆಳಕನ್ನು ಬಳಸಬೇಕು. ಹೆಚ್ಚು ಪ್ರಕಾಶಮಾನವಾದ ದೀಪಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುವುದು ಉತ್ತಮ.
- ಸಂಜೆ ವೇಳೆ ಅನಿವಾರ್ಯವಾಗಿ ಪರದೆ ಮುಂದೆ ಕೆಲಸ ಮಾಡಬೇಕಾದರೆ ಬ್ಲೂ ಲೈಟ್ ಬ್ಲಾಕಿಂಗ್ ಕನ್ನಡಕಗಳನ್ನು ಬಳಸಬಹುದು. ಆದರೆ ಇವು ರಾತ್ರಿ ತಡವಾಗಿ ಪರದೆ ನೋಡುವುದಕ್ಕೆ ಪರವಾನಗಿ ಅಲ್ಲ ಎಂಬುದನ್ನು ತಜ್ಞರು ನೆನಪಿಸುತ್ತಾರೆ.
ಪೌಷ್ಟಿಕ ಆಹಾರವೂ ಅಷ್ಟೇ ಮುಖ್ಯ
ಕೆಲಸ ಮಾಡುವಾಗ ಆಗಾಗ ಕಣ್ಣು ಮಿಟುಕಿಸುವುದು ಹಾಗೂ ಮೊಬೈಲ್ ಅನ್ನು ಕಣ್ಣಿಗೆ ತುಂಬಾ ಹತ್ತಿರ ಹಿಡಿಯದೇ ಸರಿಯಾದ ಅಂತರದಲ್ಲಿ ಬಳಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.ಅದೇ ರೀತಿ ಬೆಳಿಗ್ಗೆ ಸ್ವಲ್ಪ ಸಮಯ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ದೇಹದ ಜೈವಿಕ ಗಡಿಯಾರ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.ವಿಟಮಿನ್ ಎ, ಒಮೆಗಾ-3 ಕೊಬ್ಬಿನಾಮ್ಲಗಳು ಹಾಗೂ ಲ್ಯೂಟೀನ್ ಅಧಿಕವಾಗಿರುವ ಕ್ಯಾರೆಟ್, ಪಾಲಕ್ ಸೊಪ್ಪು, ವಾಲ್‌ನಟ್ಸ್, ಅಗಸೆ ಬೀಜಗಳು ಹಾಗೂ ಬಣ್ಣಬಣ್ಣದ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ.ವಿಶೇಷವಾಗಿ ಮಕ್ಕಳಲ್ಲಿ ಮನರಂಜನೆಗಾಗಿ ಪರದೆ ಬಳಕೆಗೆ ಕಟ್ಟುನಿಟ್ಟಿನ ಮಿತಿಯನ್ನು ವಿಧಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಅವರ ನಿದ್ರೆ, ಏಕಾಗ್ರತೆ, ಮಾನಸಿಕ ಸ್ಥಿತಿ ಹಾಗೂ ಮೆದುಳಿನ ಬೆಳವಣಿಗೆ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಅತಿಯಾದ ಪರದೆ ಬಳಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ಕಣ್ಣುಗಳಿಗೆ ಮತ್ತೊಂದು ಫಿಲ್ಟರ್ ಅಗತ್ಯವಿಲ್ಲ; ಸರಿಯಾದ ವಿಶ್ರಾಂತಿ ಅಗತ್ಯ. ಆಗಾಗ ಕಣ್ಣು ಮಿಟುಕಿಸುವುದು, ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು, ಕತ್ತಲಿನಲ್ಲಿ ಶಾಂತವಾಗಿ ನಿದ್ರೆ ಮಾಡುವುದು ಹಾಗೂ ಅನಗತ್ಯ ಪರದೆ ಬಳಕೆಯನ್ನು ಕಡಿಮೆ ಮಾಡುವಂತಹ ಸಣ್ಣ ಅಭ್ಯಾಸಗಳೇ ಕಣ್ಣಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

