ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದ ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಡಿಎಂಕೆ ಮಾತುಕತೆ ಆರಂಭಿಸಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ.
ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಬೇಡಿಕೆಯನ್ನು ಡಿಎಂಕೆ ಪರಿಗಣಿಸುವುದು ಕಷ್ಟವಿದೆ. ಹೆಚ್ಚಿನ ಸೀಟುಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಆದರೆ ಮೈತ್ರಿಕೂಟದಲ್ಲಿ ಹೆಚ್ಚು ಪಕ್ಷಗಳು ಇರುವ ಕಾರಣಕ್ಕೆ ಹೆಚ್ಚಿನ ಸೀಟು ನೀಡಲಾಗದು ಎಂಬುದು ಡಿಎಂಕೆ ವಾದವಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಕಾಂಗ್ರೆಸ್ ಬೇಡಿಕೆ ಇಟ್ಟಿರುವಷ್ಟು ಹೆಚ್ಚಿನ ಸೀಟುಗಳನ್ನು ನೀಡುವ ಒತ್ತಾಯಕ್ಕೆ ಡಿಎಂಕೆ ಮಣಿಯುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ ಕನಿಷ್ಠ 39 ಸೀಟುಗಳು ಬೇಕು ಎಂದು ಬೇಡಿಕೆ ಇಟ್ಟಿದ್ದು, ಆಡಳಿತಾರೂಢ ಡಿಎಂಕೆ ನಾಯಕತ್ವ ಇದನ್ನು ನಿರಾಕರಿಸಿದೆ.
“ನಾವು ನಮ್ಮ ಪ್ರಸ್ತಾಪವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಅವರಿಗೆ 25 ವಿಧಾನಸಭಾ ಸ್ಥಾನಗಳು ಮತ್ತು 1 ರಾಜ್ಯಸಭಾ ಸ್ಥಾನವನ್ನು ನೀಡಲು ಸಿದ್ಧರಿದ್ದೇವೆ. ಆದರೆ ಕಾಂಗ್ರೆಸ್ 39 ವಿಧಾನಸಭಾ ಸ್ಥಾನಗಳು ಮತ್ತು 2 ರಾಜ್ಯಸಭಾ ಸ್ಥಾನಗಳನ್ನು ಕೇಳುತ್ತಿದೆ” ಎಂದು ಡಿಎಂಕೆ ನಾಯಕರೊಬ್ಬರು ಹೇಳಿದ್ದಾರೆ.
“ನಾವು ಹೊಸ ಮಿತ್ರಪಕ್ಷಗಳಿಗೂ ಸ್ಥಾನಗಳನ್ನು ಹಂಚಬೇಕಾಗಿರುವುದರಿಂದ ಅವರ ಈ ಬೇಡಿಕೆಯನ್ನು ಪೂರೈಸುವುದು ಸಾಧ್ಯವಿಲ್ಲ ಈ ಕುರಿತು ಡಿಎಂಕೆ ನಾಯಕರು ಸಹ ಸ್ಪಷ್ಟವಾದ ನಿಲುವು ಹೊಂದಿದ್ದಾರೆ” ಎಂದರು.
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮಾತುಕತೆಗಳನ್ನು ನಡೆಸುತ್ತಿದೆ ಎಂಬ ಊಹಾಪೋಹಗಳ ನಡುವೆ, ಕಾಂಗ್ರೆಸ್ ಜೊತೆ ಹೆಚ್ಚಿನ ಸೀಟು ಹಂಚಿಕೆಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಡಿಎಂಕೆ ಹೇಳಿದೆ.
“ಅವರೇ ತಮ್ಮ ಬೇಡಿಕೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು ತಮ್ಮ ಬಿಗಿಪಟ್ಟು ಸಡಿಲಿಸಿದರೆ ಮಾತ್ರ ಅವರೊಂದಿಗೆ ಮಾತುಕತೆ ನಡೆಸಬಹುದು. ಈಗ ನಿರ್ಧಾರ ಅವರ ಕೈಯಲ್ಲಿದೆ” ಎಂದು ಡಿಎಂಕೆ ನಾಯಕ ಸ್ಪಷ್ಟಪಡಿಸಿದರು.
ಡಿಎಂಕೆ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರ ನಡುವೆ ಹೆಚ್ಚಿನ ಮಾತುಕತೆ ನಡೆದಿಲ್ಲ. ತಮಿಳುನಾಡಿನ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ತಮ್ಮ ಪಕ್ಷದ ನಿಲುವನ್ನು ಈ ಹಿಂದೆ ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ಅವರ ಬಳಿ ಚರ್ಚಿಸಿದ್ದರು.
ಕಳೆದ ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರು. ಆದರೆ ಕಾಂಗ್ರೆಸ್ ಬೇಡಿಕೆಗೆ ಡಿಎಂಕೆ ಒಪ್ಪಿಲ್ಲ.

