ಬೆಂಗಳೂರು: ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ ಜನರು ಈ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಈ ವಿಚಾರವಾಗಿ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ ಎಂದು ತಿಳಿಸಿದರು.
ಕೆಲವು ಸಾರ್ವಜನಿಕರು ಕೆಇಬಿಗೆ ಠೇವಣಿ ಪಾವತಿ ಮಾಡಿದ್ದು, ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತಿದ್ದೇವೆ. ಕಾನೂನು ತಜ್ಞರು ಈ ಸಮಸ್ಯೆ ಯಾವ ರೀತಿ ಬಗೆಹರಿಸಬಹುದು ಎಂದು ಪ್ರಯತ್ನ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಇದನ್ನು ಯಾವ ರೀತಿ ಬಗೆಹರಿಸಲಿದ್ದಾರೆ ಎಂದು ಮಾಹಿತಿ ಕಲೆಹಾಕುತ್ತೇವೆ. ಈ ಮಧ್ಯೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ಅಕ್ರಮವಿದ್ದರೂ ನೀರಿನ ಸಂಪರ್ಕ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು ಆದರೆ ಈ ಹಿಂದಿನ ಆದೇಶಕ್ಕಿಂತ ಈಗಿನ ಆದೇಶ ಮುಖ್ಯ. ಇದೇ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿದ ಕಾರಣ ವಿಚಾರಣೆ ಮಾಡಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಜೊತೆಗೆ ಇದನ್ನು ಜಾರಿಗೊಳಿಸುವಂತೆಯೂ ಆದೇಶ ನೀಡಿದೆ ಎಂದರು.
ಅಕ್ರಮ ಸಕ್ರಮ ಬಿಲ್ ಗೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ತಡೆಹಿಡಿಯಲಾಗಿದೆ. ನಮ್ಮ ಸರ್ಕಾರ ಎ ಖಾತಾ, ಬಿ ಖಾತ ಎಲ್ಲ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡುತ್ತಿದೆ. 110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಮುಂದಾಗಿದ್ದೆವು. ಈ ತೀರ್ಪಿನ ನಂತರ ಬಿಡ್ಬ್ಲ್ಯೂಎಸ್ಎಸ್ ಬಿಗೆ ತೊಂದರೆಯಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ 39 ಸಾವಿರ ನೀರಿನ ಸಂಪರ್ಕ ನೀಡಿದ್ದೆವು. ಈ ವರ್ಷ ಕೇವಲ 300 ಸಂಪರ್ಕ ನೀಡಿದ್ದೇವೆ. ಈ ವಿಚಾರವಾಗಿ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.